Sunday, July 26, 2009

ಹೇಯ್ ತರ್ಲೆ... 'ದೊಡ್ಡ ಹೆಜ್ಜಾರ್ಲೆ'


ಬ್ಬಬ್ಬಾ... ಇಸ್ಟೊಂದು ದೊಡ್ಡ ಬಾತುಕೋಳಿ..!
ನೀವಂದುಕೊಂಡಂತೆ ಇದು ಖಂಡಿತ ಬಾತುಕೋಳಿಯಲ್ಲ. ಬಾತುಕೋಳಿಗಿಂತ ಸಾಕಷ್ಟು ದೊಡ್ಡದಾಗಿರುವ ಜಲಪಕ್ಷಿ. ನಂಬಲಿಕ್ಕೇ ಅಸಾಧ್ಯ. ಇದು ಮಾಂಸಹಾರಿಯೂ ಹೌದು, ಸಸ್ಯಹಾರಿಯೂ ಹೌದು!
ಹಾಗಾದರೆ ಇದಾವ ಜಾತಿಗೆ ಸೇರಿದ ಹಕ್ಕಿ ಎಂದು ತಡಕಾಡಿದರೆ ನಿಮಗೆ ಸಿಗದಿರುವ ಹಕ್ಕಿಯೇನಲ್ಲ. ಸುಲಭವಾಗಿಯೇ ಗುರುತಿಸುತ್ತೀರಿ. ಇದು ಹೆಜ್ಜಾರ್ಲೆ ಜಾತಿಗೆ ಸೇರಿದ ಹಕ್ಕಿ. ಗಾತ್ರದಲ್ಲಿ ಸಾಮಾನ್ಯ ಹೆಜ್ಜಾರ್ಲೆಗಿಂತ ದೊಡ್ಡದಾಗಿರುವ ಕಾರಣ ಇದನ್ನು ದೊಡ್ಡ ಹೆಜ್ಜಾರ್ಲೆ, ಬಿಳಿ ಜೋಳಿಗೆ ಕೊಕ್ಕ (Great White Pelicon) ಎಂದು ಕರೆಯುತ್ತಾರೆ.
ಜಾತಿಯ ಹಕ್ಕಿಗಳಲ್ಲಿ ಇದು ಭಾರೀ ಗಾತ್ರದ ಹಕ್ಕಿ. ಹದ್ದಿಗಿಂತ ದೊಡ್ಡದಾದ ಹಕ್ಕಿ. ರೆಕ್ಕೆ ಬಿಚ್ಚಿ ನಿಂತರೆ ಹಕ್ಕಿಯ ಅಗಲ ಕನಿಷ್ಠ ನಾಲ್ಕು ಅಡಿ ಇರುತ್ತದೆ. ಅಂದಾಜು ಎರಡರಿಂದ ಎರಡೂವರೆ ಅಡಿ ಉದ್ದವಿರುತ್ತದೆ. ಹಕ್ಕಿಗೆ ಯಾವತ್ತೂ ನೀರಿನಲ್ಲಿ ತೆಲಾಡುವುದೆಂದರೆ ಬಲು ಇಷ್ಟ. ಕೆರೆಯಲ್ಲೇ ಮುಳುಗೇಳುತ್ತ ಕಾಲ ಕಳೆಯುತ್ತದೆ. ಅಗಾಗ ಇನ್ನುಳಿದ ಜಲಜೀವಿಗಳಿಗೆ ತರ್ಲೆ ಮಾಡುತ್ತಿರುತ್ತದೆ.
ನೀರಿಗೆ ಬರುವ ಸಣ್ಣಪುಟ್ಟ ಜೀವಿಗಳು, ನೀರಲ್ಲೇ ಬೆಳೆಯುವ ಹುಲ್ಲುಗಳನ್ನು ತಿಂದು ಬದುಕುತ್ತವೆ. ಹಕ್ಕಿಯಲ್ಲಿ ಕಾಣಬಹುದಾದ ವಿಶೇಷವೆಂದರೆ ದೊಡ್ಡ ಹೆಜ್ಜಾರ್ಲೆ ಬೇಟೆಗಾಗಿ ದಿಡೀರ್ ಎಂದು ನೀರೊಳಗೆ ನುಗ್ಗಿ ಮೀನು, ಹಾವುಗಳನ್ನು ಹಿಡಿದು ತಿನ್ನುತ್ತದೆ. ಅದರಲ್ಲೂ ಇದರ ಬಲಿಷ್ಟ ಕೊಕ್ಕುಗಳು ಇದಕ್ಕೆ ಅನುಕೂಲವಾಗಿದೆ ಕೊಕ್ಕಿನ ಕೆಳಕ್ಕಿರುವ ಚೀಲ ಹಕ್ಕಿಯ ಬಂಡವಾಳ. ಕೊಕ್ಕು ಕತ್ತಿನಸ್ಟೇ ಉದ್ದವಾಗಿರುತ್ತದೆ.
ಸಾಮಾನ್ಯವಾಗಿ ವವೆಂಬರ್-ಮೇ ತಿಂಗಳಿನ ಅವಧಿಯಲ್ಲಿ ಎರಡರಿಂದ ಮೂರು ಮೊಟ್ಟೆ ಇಟ್ಟು ಮರಿಮಾಡುತ್ತದೆ. ಸಂತಾನೋತ್ಪತ್ತಿ ವೇಳೆ ನೆತ್ತಿಯ ಮೇಲೆ ಬೆಳ್ಳಗಿನ ಜುಟ್ಟು ಬರುತ್ತದೆ. ಹಕ್ಕಿಯ ದೇಹ ಬೆಳ್ಳಗಿರುತ್ತದೆ. ಅಥವಾ ಅಲ್ಲಲ್ಲಿ ಬೂದು ಮಿಶ್ರಿತ ಬೆಳ್ಳಗಿನ ಬಣ್ಣವಿರುತ್ತದೆ. ಕೊಕ್ಕು ಮತ್ತು ಕಾಲುಗಳಲ್ಲಿ ಹಳದಿ ಮಿಶ್ರಿತ ಬೆಳ್ಳಗಿನ ಬಣ್ಣ ಇರುತ್ತದೆ. ಸಣ್ಣ ಸಣ್ಣ ಮೀನುಗಳೆಂದರೆ ಹಕ್ಕಿಗೆ ಪಂಚಪ್ರಾಣ. ಇದಕ್ಕೆ ತನ್ನ ಕೊಕ್ಕಿನ ಕೆಳಕ್ಕಿರುವ ಜೋಳಿಗೆಯನ್ನು ಚೆನ್ನಾಗಿ ಬಳಸಿಕೊಳ್ಳುತ್ತದೆ.

Tuesday, July 14, 2009

ಬೀದಿಗೆ ಬಾರದು ಬೂದು ಸಿಪಿಲೆ!

ಳಿ ಜೋರಾ ಗುತ್ತಿದ್ದಂತೆ ಇನ್ನಸ್ಟು ಚಳಿ ಇರುವ ಪ್ರದೇಶಗಳಿಗೆ ವಲಸೆ ಹೋಗುವ ಹಕ್ಕಿಗಳಿವೆ. ಗುಂಪಿಗೆ ಸೇರಿದ ಹಕ್ಕಿಗಳಲ್ಲಿ 'ಬೂದು ಸಿಪಿಲೆ'(Grey Wagtail) ಕೂಡ ಒಂದು. ಸಾಮಾನ್ಯವಾಗಿ ಕೃಷಿಭೂಮಿ, ಜೌಗು ಪ್ರದೇಶಗಳಲ್ಲಿ ಇರುವ ಬೂದು ಸಿಪಿಲೆ ನೋಡಲಿಕ್ಕೆ ಹೆಚ್ಚು ಕಡಿಮೆ ಹಳದಿ ಸಿಪಿಲೆಯಂತೆ ಇರುತ್ತದೆ.
ಬಹುತೇಕ ಪ್ರದೇಶಗಳಲ್ಲಿ ಈ ಹಕ್ಕಿಯನ್ನೇ ಬೂದು ಸಿಪಿಲೆ ಎಂದು ಕರೆಯುವುದುಂಟು. ಈ ಹಕ್ಕಿಗೂ ಬೂದು ಸಿಪಿಲೆಗೂ ಹೆಚ್ಚೇನು ವ್ಯತ್ಯಾಸವಿಲ್ಲ. ಬೂದು ಸಿಪಿಲೆಯ ಮೇಲ್ಭಾಗವೆಲ್ಲ ಬೂದು ಮಿಶ್ರಿತ ಕಂದು ಬಣ್ಣದಿಂದ ಇದ್ದರೆ, ಹಳದಿ ಸಿಪಿಲೆಯ ಮೇಲ್ಭಾಗವೆಲ್ಲ ಹಳದಿ ಮಿಶ್ರಿತ ಕಪ್ಪು ಬಣ್ಣ. ಅಕ್ಕ-ಪಕ್ಕಕ್ಕೆ ನಿಲ್ಲಿಸಿದರೆ ಗುರುತಿಸುವುದು ಬಹಳ ಕಷ್ಟ. ಗಾತ್ರದಲ್ಲೂ ತೀರಾ ವ್ಯತ್ಯಾಸವಿಲ್ಲ. ಹಳದಿ ಸಿಪಿಲೆ ಕೊಂಚ ಚಿಕ್ಕದಿರಬಹುದು. ಇನ್ನುಳಿದ ಸಿಪಿಲೆಗಳಂತೆ ಬಾಲವನ್ನು ಮೇಲಕ್ಕೆ-ಕೆಳಕ್ಕೆ ಅಲ್ಲಾಡಿಸುತ್ತಾ ಇರುತ್ತದೆ. ಹೆಚ್ಚಿನ ಸಮಯವನ್ನು ನೆಲದ ಮೇಲೆ ನಡೆದಾಡಿಕೊಂಡು ಕಳೆಯುವ ಬೂದು ಸಿಪಿಲೆ ಕ್ಷಣಕ್ಷಣಕ್ಕೂ ಜಂಪ್ ಮಾಡುತ್ತಿರುತ್ತದೆ. ಅನಿವಾರ್ಯ ಎನಿಸಿದಾಗ ಮಾತ್ರ ಹಾರುತ್ತದೆ. ಓಟದಲ್ಲಿಯೂ ಈ ಹಕ್ಕಿ ಯಾರಿಗೂ ಪೈಪೋಟಿ ನೀಡಬಲ್ಲದು.
ಬೂದು ಸಿಪಿಲೆ ಬಹಳ ಚುರುಕಿನ ಹಕ್ಕಿ. ಗಾಬರಿಯಾದಾಗಲೆಲ್ಲ ಸ್ವೀಸ್ ಸ್ವಿಸ್... ಎಂದು ಸದ್ದು ಮಾಡುತ್ತಿರುತ್ತದೆ. ಗಾತ್ರದಲ್ಲಿ ಗುಬ್ಬಚ್ಚಿಗಿಂತ ಸ್ವಲ್ಪ ದೊಡ್ಡದು. ಎದೆ, ಹೊಟ್ಟೆ ಭಾಗ ಹಳದಿ ಮಿಶ್ರಿತ ಬೆಳ್ಳಗಿನ ಬಣ್ಣದಿಂದ ಇರುತ್ತದೆ. 8 ವರ್ಷ ಬದುಕಿರುವ ಬೂದು ಸಿಪಿಲೆ ಹಕ್ಕಿಯನ್ನು ಬೂದು ಕುಂಡೆಕುಸ್ಕ, ಬೂದು ದಾಸರಿ, ಬೂದು ಬಾಲಾಡಿ ಎಂದೂ ಕರೆಯುತ್ತಾರೆ. ಚಾರ್ಚ್-ಅಕ್ಟೋಬರ್ ತಿಂಗಳಾವಧಿಯಲ್ಲಿ 4-5 ಮೊಟ್ಟೆಗಳನ್ನಿಟ್ಟು ಮರಿಮಾಡುತ್ತದೆ. ಕೀಟಗಳು ಇದರ ಪ್ರಮುಖ ಆಹಾರ.
------------------------------

'ಸಿಮೆಂಟ್' ಬೆಳ್ಳಕ್ಕಿ ಇದು ಕಡಲ ಹಕ್ಕಿ
ಡೀ ದೇಹಕ್ಕೆ ಸಿಮೆಂಟ್!
ಇದೇನು ಜೀವಂತ ಹಕ್ಕಿಯೋ ಅಥವಾ ಸಿಮೆಂಟಿನಿಂದ ರಚಿತ ನಿರ್ಜೀವ ಕಲಾಕೃತಿಯೋ ಎಂದು ನೀವು ಹುಬ್ಬು ಮೇಲೇರಿಸಿದರೆ ಆಶ್ಚರ್ಯವಿಲ್ಲ. ಅಸ್ಟರಮಟ್ಟಿಗೆ ಈ ಹಕ್ಕಿಗೆ ಸಿಮೆಂಟ್ ಬಣ್ಣ. ಪ್ರಾದೇಶಿಕವಾಗಿ ಈ ಹಕ್ಕಿಯನ್ನು ಸಿಮೆಂಟ್ ಬೆಳ್ಳಕ್ಕಿ ಎಂದು ಕರೆದಿದ್ದಾರೆ. ಕತ್ತಿನ ಕೆಳಭಾಗ, ರೆಕ್ಕೆಗಳ ಕೆಳಭಾಗ ಮತ್ತು ಹೊಟ್ಟೆಯಿಂದ ಪುಕ್ಕದ ನಡುವಿನ ಭಾಗದಲ್ಲಿ ಬೆಳ್ಳಗಾಗಿರುತ್ತದೆ.
ಅಸ್ತಕ್ಕು ಈ ಹಕ್ಕಿ ಎಲ್ಲೆಂದರಲ್ಲಿ ಕಾಣಸಿಗುವುದಿಲ್ಲ. ಸಾಮಾನ್ಯವಾಗಿ ಬೆಳ್ಳಕ್ಕಿಗಳು ಗದ್ದೆ, ಜೌಗು ಪ್ರದೇಶ ಮತ್ತು ಹುಲ್ಲುಗಾವಲು ಪ್ರದೇಶಗಳಲ್ಲಿ ಇರುವುದು ಜಾಸ್ತಿ. ಆದರೆ ಈ 'ಕಡಲ ಬೆಳ್ಳಕ್ಕಿ' (Western Reef Heron ) ಹಾಗಲ್ಲ. ಹೆಸರಿಗೆ ತಕ್ಕಂತೆ ಇದರ ವಾಸವೆನಿದ್ದರೂ ಸಮುದ್ರಕ್ಕೆ ಸನಿಹದಲ್ಲೆ.
ವಿಶೇಷವೆಂದರೆ ಈ ಕಡಲ ಬೆಳ್ಳಕ್ಕಿಗೆ ಸಮುದ್ರದ ಅಲೆಗಳ ಭಯವೇ ಇಲ್ಲ. ಅದೆಸ್ಟೇ ದೊಡ್ಡ ಅಲೆ ಬಂದರೂ ನಿರ್ಭೀತಿಯಿಂದ ತೀರದಲ್ಲಿ ಬೇಟೆಯಾಡುತ್ತಿರುತ್ತವೆ. ಸಮುದ್ರದ ಸಣ್ಣ ಸಣ್ಣ ಜೀವಿಗಳೇ ಇದರ ಆಹಾರ. ಬಿಳಿ ಏಡಿ ಎಂದರಂತೂ ಈ ಹಕ್ಕಿಗೆ ಪಂಚಪ್ರಾಣ. ಮುಂಗಾರು ಆರಂಭಗೊಂಡು ಸಮುದ್ರ ತನ್ನ ಅಬ್ಬರದ ಗರ್ಜನೆ ಆರಂಭಿಸಿದಾಗಲಂತೂ ಅಲ್ಲಿಂದ ಅಲ್ಲಾಡುವುದಿಲ್ಲ. ಆಗ ಜೀವಿಗಳು ಕಾಣಿಸಿಕೊಳ್ಳುತ್ತವೆಂದು ಚೆನ್ನಾಗಿ ಅರಿತಿದೆ ಈ ಬೆಳ್ಳಕ್ಕಿ.
ಈ ಹಕ್ಕಿಯಲ್ಲಿ ಕಾಣಬಹುದಾದ ಇನ್ನೊಂದು ವಿಶೇಷವೆಂದರೆ ಸಂತಾನೋತ್ಪತ್ತಿಯ ವೇಳೆಯಲ್ಲಿ ಹೆಣ್ಣು ಹಕ್ಕಿಯ ನೆತ್ತಿಯಿಂದ ನೀಳವಾದ ಜುಟ್ಟು ಬೆಳೆಯುತ್ತಾ ಇರುತ್ತದೆ. ಸಾಮಾನ್ಯವಾಗಿ ಏಪ್ರಿಲ್-ಜುಲೈ ಅವಧಿಯಲ್ಲಿ 2-4 ಮೊಟ್ಟೆಗಳನ್ನಿಟ್ಟು ಮರಿಮಾಡುತ್ತದೆ. ಭಾರತ, ಲಂಕಾ, ಬಾಂಗ್ಲಗಳಲ್ಲಿ ಈ ಹಕ್ಕಿಯ ಸಂತತಿ ಇದೆ. ಹಾರಾಟದಲ್ಲಿ ಎಷ್ಟು ನಿಪುಣ ಹಕ್ಕಿಯೋ ಅಸ್ಟೇ ಜಿಪುಣ ಕೂಡ ಹೌದು.

Thursday, July 2, 2009

ಕೋಗಿಲೆಗೆ ತಲೆಯ ಮೇಲೆ ಜುಟ್ಟು...



ಸಾಮಾನ್ಯವಾಗಿ ಮದುರ ಕಂಠದ ಧ್ವನಿಯನ್ನು ಕೋಗಿಲೆಗೆ ಹೊಲಿಸುತ್ತೇವೆ. ಆದರೆ ಆ ಕೋಗಿಲೆಯನ್ನು ಕಣ್ಣಾರೆ ಕಂಡರೆ 'ಯಪ್ಪಾ ಇದೇನು ಕಪ್ಪು' ಎಂದು ರಾಗ ಎಳೆಯುವುದು ಸಾಮಾನ್ಯ. ಆದರೆ ಈ ಕೋಗಿಲೆಯನ್ನು ನೋಡಿದರೆ ನಿಮಗೆ ನಿರಾಸೆಯಾಗುವುದಿಲ್ಲ.
ಕಾರಣ ಈ ಹಕ್ಕಿ ಅಸ್ಟು ಕಪ್ಪಗಿನ ಕೋಗಿಲೆಯಲ್ಲ. ಭಾರತದ ಸಾಮನ್ಯ ಕೋಗಿಲೆಗಿಂತ ಇದು ಭಿನ್ನವಾಗಿರುತ್ತದೆ. ಈ ಹಕ್ಕಿಯಲ್ಲಿ ಕಾಣಬಹುದಾದ ಇನ್ನೊಂದು ವಿಶೇಷವೆಂದರೆ ಇದು ನಮ್ಮ ದೇಶದ ಹಕ್ಕಿ ಅಲ್ಲ. ಆದರೆ ವರ್ಷದಲ್ಲಿ ಅರ್ಧದಸ್ಟು ದಿನಗಳನ್ನು ಸಹ್ಯಾದ್ರಿ ಸೇರಿ ಭಾರತದ ಇನ್ನಿತರ ದಟ್ಟಡವಿಯಲ್ಲೇ ಕಳೆಯುತ್ತದೆ. ಇನ್ನೇನು ಮಳೆಗಾಲ ಮುಗಿಯುತ್ತಿದೆ ಎನ್ನುವ ದಿನಗಳಲ್ಲಿ ದಕ್ಷಿಣ ಆಫ್ರಿಕಾದಿಂದ ನೇರವಾಗಿ ಭಾರತಕ್ಕೆ ವಲಸೆ ಬರುತ್ತವೆ. ಕತ್ತಲೆ ಆವರಿಸಿರುವ ದಟ್ಟಡವಿಯಲ್ಲೇ ಕಾಲ ಕಳೆಯುತ್ತದೆ.
ಆಫ್ರಿಕಾ ಖಂಡದಿಂದ ಬರುವ ಅತಿಥಿಗಳ ವಲಸೆ ಎಲ್ಲ ವರ್ಷವೂ ಒಂದೇ ರೀತಿ ಇರುವುದಿಲ್ಲ. ಮುಂಗಾರಿನಲ್ಲಿ ಹೇಗೆ ಬದಲಾವಣೆಗಳಿವೆಯೋ ಹಾಗೇ ಬದಲಾಗುತ್ತ ಹೋಗುತ್ತದೆ. ಮಳೆಯ ಆರಂಭವೇ ತಡವಾದರೆ ಭಾರತಕ್ಕೆ ಇದರ ಆಗಮನವೂ ತಡವಾಗುತ್ತದೆ. ಈ ಅತಿಥಿಯನ್ನು ನಾವು 'ಜುಟ್ಟು ಕೋಗಿಲೆ' (Pied Crested Cuckoo) ಎಂದು ಕರೆದಿದ್ದೇವೆ.
ತಲೆಯ ಮೇಲೆ ಬಿಳಿ ಮಿಂಚುಳ್ಳಿ, ಚೊಟ್ಟಿ ಗೊರವ ಹಕ್ಕಿಯಂತೆ ಜುಟ್ಟು ಇರುವ ಕಾರಣ ಇದಕ್ಕೆ ಈ ಹೆಸರು. ದೇಹದ ಹಿಂಭಾಗವೆಲ್ಲ ನೀಲಿ, ಹಸಿರು ಮಿಶ್ರಿತ ಕಪ್ಪು ಬಣ್ಣದಿಂದ ಇರುತ್ತದೆ. ಆದರೆ ಕತ್ತಿನಿಂದ ಕೆಳಕ್ಕೆ, ಹೊಟ್ಟೆ ಮತ್ತು ಎದೆಯೆಲ್ಲ ಬೆಳ್ಳಗಾಗಿರುತ್ತದೆ. ರೆಕ್ಕೆಯ ಕೆಳಭಾಗದಲ್ಲೂ ಬೆಳ್ಳಗಾಗಿದ್ದು, ಇದು ಹಾರುವಾಗ ಮಾತ್ರ ಕಾಣಿಸುತ್ತದೆ. ರೆಕ್ಕೆಯ ಗರಿಗಳ ತುದಿಯಲ್ಲಿ ಬಿಳಿಯ ಪಟ್ಟಿಗಳಿರುತ್ತವೆ.
ಈ ಹಕ್ಕಿಯನ್ನು ಭಾರತ ಸೇರಿ ನೆರೆಯ ಬಾಂಗ್ಲ, ಶ್ರೀಲಂಕ, ನೇಪಾಳ, ಪಾಕಿಸ್ತಾನಗಳಲ್ಲಿಯೂ ಕಾಣಬಹುದು. ಸಂತಾನೋತ್ಪತ್ತಿಯ ವೇಳೆಯಲ್ಲಿ ಬೇರೆ ಹಕ್ಕಿಯ ಗೂಡನ್ನು ಹುಡುಕಲು ಆರಂಭಿಸುತ್ತದೆ. ಸಾಮಾನ್ಯವಾಗಿ ಕಾಗೆಯ ಗೂಡಲ್ಲಿ 2 ರಿಂದ 3 ಮೊಟ್ಟೆಗಳನ್ನಿಟ್ಟು ಮರಿಮಾಡುತ್ತದೆ. ವಸಂತದ ವೇಳೆಯಲ್ಲಿ ಫ್ಯೂ ಫ್ಯೂ ಫೀ... ಎಂದು ಕೂಗುತ್ತಿರುತ್ತದೆ. ಜುಟ್ಟು ಕೋಗಿಲೆಯನ್ನು ತುರಾಯಿ ಕೋಗಿಲೆ, ಚೊಟ್ಟಿ ಕೋಗಿಲೆ ಎಂದೂ ಕರೆಯುತ್ತಾರೆ.
ಚಿತ್ರ ಕೃಪೆ: ಅಂತರ್ಜಾಲ