Friday, March 12, 2010

ಚೋರೆಚಾಣನ ಚೂರಿ ಇರಿತ



ಕೆಲವೊಮ್ಮೆ ಏನೇನೋ ಕಾರಣಕ್ಕಾಗಿ ಒಂದೆಡೆ ಯಿಂದ ಇನ್ನೊಂ ದೆಡೆಗೆ ಸ್ಥಳಾಂತರ ಗೊಳ್ಳಲು ನಮ್ಮ ಮನಸ್ಸುಗಳು ಹೇಗೆ ಕೆಲಸ ಮಾಡುತ್ತವೋ ಹಾಗೆಯೇ ಹಕ್ಕಿಗಳು ಕೆಲವೊಮ್ಮೆ ತನ್ನ ಜಾಗ ಬದಲಾಯಿಸುತ್ತವೆ.
ಇಂಥ ಗುಣವನ್ನು ಸುಲಭವಾಗಿ ಗುರುತಿಸಬಲ್ಲ ಹಕ್ಕಿ ಎಂದರೆ ಈ 'ಚೋರೆಚಾಣ' ಅರ್ಥಾತ್ Kestrel. ಗಿಡುಗ ಜಾತಿಗೆ ಸೇರಿದ ಹಕ್ಕಿ ಇದು. ವಿಚಿತ್ರ ಸ್ವಭಾವದ ಹಕ್ಕಿ ಇದು. ನಮಗೆ ಹೇಗೆ ಒಂದು ಸ್ಥಳದಲ್ಲಿ ಹೊಂದಿಕೊಳ್ಳಲು ಸಾಧ್ಯವಾಗದೇ ಇನ್ನೊಂದು ಸೂಕ್ತ ಸ್ಥಳಕ್ಕಾಗಿ ಹುಡುಕಾಡಿ ಅದನ್ನು ದಕ್ಕಿಸಿಕೊಳ್ಳುತ್ತೇವೋ ಹಾಗೆಯೇ ಈ ಚೋರೆ ಚಾಣ ಕೂಡ ತನ್ನ ಆಹಾರ, ಆವಾಸಕ್ಕಾಗಲಿ ಆಗಾಗ ಸ್ಥಳ ಬದಲಾಯಿಸುತ್ತವೆ. ಇನ್ನೊಂದು ವಿಶೇಷತೆಯನ್ನು ಈ ಹಕ್ಕಿಯಲ್ಲಿ ಕಾಣಲು ಸಾಧ್ಯ. ಹಾರಾಟದಲ್ಲಿ ಈ ಹಕ್ಕಿ ಯುದ್ಧ ವಿಮಾನಗಳು ಇದ್ದಂತೆ. ಹಾರುವಾಗ ಯಾವುದೇ ಕ್ಷಣದಲ್ಲಿ ತನ್ನ ಹಾರಾಟದ ದಿಕ್ಕನ್ನು ಬದಲಾಯಿಸಿಕೊಳ್ಳುತ್ತದೆ. ಅದಕ್ಕೆ ತಕ್ಕುದಾದ ರೆಕ್ಕೆಯ ವಿನ್ಯಾಸ ಇದಕ್ಕಿದೆ. ತನ್ನ ರೆಕ್ಕೆಗಳ ಚಲನೆಯಿಂದಲೇ ಸುಲಭವಾಗಿ ದಿಕ್ಕನ್ನು ಬದಲಿಸಿಕೊಳ್ಳುತ್ತದೆ.
ಈ ಚೋರೆ ಚಾಣ ಹಕ್ಕಿಯನ್ನು ರಾಜ್ಯದ ಬಯಲುಸೀಮೆ ಪ್ರದೇಶಗಳಲ್ಲಿ ಕಾಣಲು ಸಾಧ್ಯ. ದೇಹದ ಬಹುತೇಕ ಭಾಗ ಕಂದು ಬಣ್ಣದಿಂದ ಕೂಡಿರುತ್ತದೆ. ಮೈಮೇಲೆ ಕಪ್ಪು ಚುಕ್ಕೆಗಳನ್ನು ನೋಡಲು ಸಾಧ್ಯ. ಪುಕ್ಕದ ತುದಿಯಲ್ಲಿ ಕಪ್ಪು ಪಟ್ಟಿಗಳಿರುತ್ತವೆ. ಕೊಕ್ಕು ಮತ್ತು ಕಾಲುಗಳು ಇನ್ನುಳಿದ ಗಿಡುಗನಂತೆ ಗಟ್ಟಿ, ಮಾಂಸ ಕಡಿದು ತಿನ್ನಲು ಅನುಕೂಲವಾಗುವಂತೆ ಇವೆ. ಕತ್ತನ್ನು ಕ್ಷಣ ಕ್ಷಣಕ್ಕೆ ಅತ್ತಿತ್ತ ಹೊರಳಿಸುತ್ತಲೇ ಇರುತ್ತದೆ. ಗಾತ್ರದಲ್ಲಿ ಹೆಚ್ಚು ಕಡಿಮೆ ಚೋರೆ ಹಕ್ಕಿಯಷ್ಟೇ ಇರುತ್ತದೆ.
ಈ ಹಕ್ಕಿಯನ್ನು ಭಾರತ, ಬಾಂಗ್ಲ, ಲಂಕಾ, ಪಾಕಿಸ್ತಾನಗಳಲ್ಲಿ ಕಾಣಲು ಸಾಧ್ಯ. ಸಂತಾನೋತ್ಪತ್ತಿಯ ವೇಳೆ ತಂಪು ಹವಾಮಾನ ಪ್ರದೇಶಗಳಿಗೆ ಹೋಗಿ ಏಪ್ರಿಲ್-ಜುಲೈ ತಿಂಗಳಾವಧಿಯಲ್ಲಿ 3 -4 ಮೊಟ್ಟೆಯಿಟ್ಟು ಮರಿ ಮಾಡುತ್ತದೆ.
ಚಿತ್ರ: ಅಂತರ್ಜಾಲ