Friday, May 29, 2009

ಕೂ... ಎನ್ನೊ 'ಕಂದು ಬೆಳವ'ನದಿಯ ದಡದಲ್ಲಿ ದೋಣಿ ಹೊರಡುವ ಮೊದಲು ನಾವಿಕ 'ಕೂ...' ಹಾಕುವುದನ್ನು ನೋಡಿದ್ದೇವೆ. ಆದರೆ ಇದೇ ತರ ಹಕ್ಕಿಯೊಂದು 'ಕೂ...' ಹಾಕುವುದನ್ನು ಎಲ್ಲಾದರೂ ನೋಡಿದ್ದೀರಾ...?
ಇಲ್ಲ ಎಂದಾದರೆ ನೋಡಿ ಇಲ್ಲಿದೆ!
ಈ 'ಕಂದು ಬೆಳವ' (Laughing Dove) 'ಕೂ...' ಎಂದು ಕೂಗಿಕೊಳ್ಳುತ್ತಲೇ ಇರುತ್ತದೆ. ನಾವಿಕ ತನ್ನ ದೋಣಿಯ ಪ್ರಯಾಣಿಕರಿಗಾಗಿ ಕೂ... ಹಾಕಿದರೆ ಇದು ತನ್ನ ಮರಿ, ಸಂಗಾತಿಗಾಗಿ ಕೂಗಿಕೊಳ್ಳುತ್ತಿರುತ್ತದೆ. ಸಾಮಾನ್ಯವಾಗಿ ಒಂಟಿಯಾಗಿ ಇರಲು ಬಯಸುವುದಿಲ್ಲ.
ಕಂದು ಬೆಳವ ಹಕ್ಕಿಗೆ ಮೊಟ್ಟೆಯಿಟ್ಟು ಮರಿಮಾಡಲು ನಿರ್ದಿಷ್ಟ ಕಾಲವಿಲ್ಲ. ತನಗಿಸ್ಟವಾದಾಗ ಸಂತಾನೋತ್ಪತ್ತಿಯ ಕಾರ್ಯದಲ್ಲಿ ತೊಡಗಿಕೊಳ್ಳುತ್ತದೆ. ಒಮ್ಮೆ ಎರಡರಿಂದ ಮೂರು ಮೊಟ್ಟೆಗಳನ್ನಿಟ್ಟು ಮರಿಮಾಡುವ ಕಂದು ಬೆಳವ, 16ರಿಂದ18 ದಿನಗಳ ಕಾಲ ಕಾವು ನೀಡುತ್ತದೆ. ಸಂತಾನೋತ್ಪತ್ತಿಯ ವೇಳೆಯಲ್ಲಿ ಮರಗಳ ಎತ್ತರದಲ್ಲಿ ಚಂದ್ರಾಕಾರದ ಗೂಡು ಕಟ್ಟಿಕೊಳ್ಳುತ್ತದೆ.
ನೋಡಲು ಪಾರಿವಾಳದಂತೆ ತೋರುವ ಕಂದು ಬೆಳವನನ್ನು ಬಿಲಗುಪ್ಪ, ಕಂದು ಕಪೋತ, ಸಣ್ಣ ಚೂರೆಹಕ್ಕಿ ಎಂದೆಲ್ಲ ಕರೆಯುತ್ತಾರೆ. ಮೈ ಬಣ್ಣ ಕಂದು ಮಿಶ್ರಿತ ಬೂದು ಇರುವ ಕಾರಣ ಈ ಹಕ್ಕಿಯನ್ನು ಕಂದು ಬೆಳವ ಎಂದು ಕರೆಯುತ್ತಾರೆ.
ಕಂದು ಬೆಳವನ ಬೆನ್ನು, ನೆತ್ತಿ, ಕತ್ತು ಕಂದು ಬಣ್ಣದಿಂದಿದ್ದರೆ, ಹೊಟ್ಟೆ, ಎದೆ ಭಾಗ ತಿಳಿ ಬಣ್ಣದಿಂದಿರುತ್ತದೆ. ಇನ್ನು ಕತ್ತಿನ ಕೆಲ ಭಾಗದಲ್ಲಿ ಚೆಸ್ ಮನೆಗಳಂತೆ ಕಪ್ಪು ಪಟ್ಟಿಗಳಿರುತ್ತವೆ. ಇದರ ಸಹಾಯದಿಂದಲೇ ಈ ಹಕ್ಕಿಯನ್ನು ಸುಲಭವಾಗಿ ಗುರುತಿಸಲು ಸಾಧ್ಯ. ಕಾಲು ಮತ್ತು ಕೊಕ್ಕು ಬೂದು ಮಿಶ್ರಿತ ಕಂದು ಬಣ್ಣದಿಂದಿರುತ್ತದೆ. ಕಣ್ಣಿನ ಸುತ್ತ ಬಿಳಿ ಪಟ್ಟಿ ಇದ್ದು, ಇದು ಮಿರುಗುತ್ತದೆ. ಉದ್ದನೆಯ ಬಾಲ ಮತ್ತು ಪುಕ್ಕವನ್ನು ಅಲ್ಲಾಡಿಸುತ್ತ ಇರುತ್ತದೆ. ಕತ್ತು ಕೂಡ ಪಾರಿವಾಳದಂತೆ ಅತ್ತಿತ್ತ ಹೂರಲಾಡುತ್ತಿರುತ್ತದೆ.
ಕುರುಚಲು ಕಾಡುಗಳಲ್ಲಿ ವಾಸವಾಗಿರುವ ಈ ಹಕ್ಕಿ ಪೋದೆಗಳಲ್ಲಿಯೂ ಗೂಡು ಮಾಡಿಕೊಳ್ಳುತ್ತದೆ. ರಾಜ್ಯದಲ್ಲಿ ನಂದಿಬೆಟ್ಟ, ಬನ್ನೇರುಘಟ್ಟ, ಸಾವನದುರ್ಗ, ದೇವರಾಯನದುರ್ಗಗಳಲ್ಲಿ ಜಾಸ್ತಿ. ಬಾಂಗ್ಲ, ಪಾಕಿಸ್ತಾನ್ ಗಳಲ್ಲಿ ನೋಡಸಿಗುತ್ತದೆ. ಬೇಳೆ-ಕಾಳುಗಳೇ ಈ ಹಕ್ಕಿಯ ಪ್ರಮುಖ ಆಹಾರ.
ಚಿತ್ರ ಕೃಪೆ: ಅಂತರ್ಜಾಲ

Wednesday, May 27, 2009

ಕಿರಿ ಕಿರಿ ಕಿರು ಮಿಂಚುಳ್ಳಿನಂಬಲಿಕ್ಕೇ ಅಸಾದ್ಯ... ದುಪ್ ಎಂದು ನೀರಿಗೆ ಬಿದ್ದರೆ ನಾಲ್ಕಾರು ನಿಮಿಷ ಎದ್ದೆಳುವುದೇ ಇಲ್ಲ. ಹೊರ ಬರುವಾಗ ಯಾವುದೇ ಕಾರಣಕ್ಕೂ ಒಂದಲ್ಲಾ ಒಂದು ಮೀನು ಅದರ ಬಾಯಲ್ಲಿ ಇರಲೇ ಬೇಕು. ಅಜ್ಜಪ್ಪ ಎಂದರೂ ಬಿಡಲೋಪ್ಪದು. ಗಾತ್ರದಲ್ಲಿ ತನ್ನಿಂತ ದೊಡ್ಡ ಗಾತ್ರದ ಬಂಗಡೆ ಮೀನೇ ಇದ್ದರೂ ಅಸ್ಟು ಸುಲಭವಾಗಿ ಬಿಡುವ ಜಾಯಮಾನದ ಹಕ್ಕಿ ಇದಲ್ಲ.
ಅದೇನಾದರೂ ಹಕ್ಕಿಗಳಿಗೆ ಡೈವಿಂಗ್ ಸ್ಪರ್ಧೆ ಏರ್ಪಡಿಸಿದರೆ ಬಹುಷಃ ಈ 'ಕಿರು ಮಿಂಚುಳ್ಳಿ' (Small Blue Kingfisher) ಚಾಂಪಿಯನ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ನಿಮ್ಮ ಮನೆಯ ಪಕ್ಕದಲ್ಲೆಲ್ಲಾದರೂ ಕೆರೆ, ಹರಿಯುವ ನೀರಿರುವ ಪ್ರದೆಶಗಳಿದ್ದರೆ ಆ ಪ್ರದೇಶದಲ್ಲಿ ಈ ಹಕ್ಕಿ ಇದ್ದೇ ಇರುತ್ತದೆ. ದಿನದ ಒಂದು ಗಂಟೆ ಆ ಪ್ರದೇಶದಲ್ಲಿ ಸದ್ದಿಲ್ಲದೆ ಕುಳಿತಿದ್ದರೆ ನೀವೂ ಈ ಹಕ್ಕಿಯನ್ನು ಸುಲಭವಾಗಿ ಗುರುತಿಸಲು ಸಾದ್ಯ.
ನೀಲಿ ಬಣ್ಣದ ಹಕ್ಕಿ ಇದು. ಕುತ್ತಿಗೆ ಮತ್ತು ಹೊಟ್ಟೆ ಭಾಗವೆಲ್ಲ ಹೊಂಬಣ್ಣದಿಂದಿರುತ್ತದೆ. ಕಿರು ಮಿಂಚುಳ್ಳಿಯ ಕೊಕ್ಕು ಬಲು ಬಲಿಷ್ಠ. ಆ ಚೋಟುದ್ದದ ಕಾಲುಗಳನ್ನು ಮಾತ್ರ ಕುಳಿತಿದ್ದಾಗ ಕಾಣಿಸುವುದೇ ಕಷ್ಟ. ಅದರಲ್ಲೂ ಸ್ವಲ್ಪ ವಯಸ್ಸಾಗಿರುವ ಹಕ್ಕಿಯಾದರಂತೂ ಗರಿಗಳು ಮುಚ್ಚಿಕೊಡಿರುತ್ತವೆ. ಪಾದಗಳು ಗುಂಡಾಗಿರುತ್ತವೆ. ಈ ಹಕ್ಕಿಯ ಹಾರಾಟ ಗಮಿನಿಸುವಾಗ ಒಮ್ಮೆ ಬೆಚ್ಚಿ ಬಿದ್ದರೂ ಅಚ್ಚರಿಯಿಲ್ಲ. ಅಸ್ಟೊಂದು ಚುರುಕುತನ ಈ ಹಕ್ಕಿಯಲ್ಲಿ ಕಾಣಬಹುದು.
ಚೀ ಚಿಕ್ ಎಂದು ಕೂಗುತ್ತಲೇ ಹಾರುವ ಈ ಕಿರು ಮಿಂಚುಳ್ಳಿ ಬಾಲ ಮತ್ತು ಕತ್ತನ್ನು ಆಗಾಗ ಮೇಲೆ-ಕೆಳಕ್ಕೆ ಮಾಡುತ್ತಲೇ ಇರುತ್ತದೆ. ನೀರು ಮತ್ತು ನೆಲದ ಮೇಲೆ ಒಂದೆರಡು ಅಡಿ ಅಂತರದಲ್ಲಿ ಎಲ್ಲಿಂದ ಎಲ್ಲಿಯ ವರೆಗೂ ಹಾರಾಡಬಲ್ಲ ಸಾಮರ್ಥ್ಯ ಈ ಹಕ್ಕಿಗಿದೆ.
ಈ ಹಕ್ಕಿಯ ಕೇಸರಿ ಮತ್ತು ನೀಲಿ ಬಣ್ಣ ಪ್ರಜ್ವಲಿಸುತ್ತದೆ. ಅದರಲ್ಲೂ ಸಂತಾನೋತ್ಪತ್ತಿಯ ವೇಳೆಯಲ್ಲಿ ಮಿರುಗುವಸ್ಟು ಪ್ರಜ್ವಲತೆ. ಸಾಮಾನ್ಯವಾಗಿ ಫೆಬ್ರವರಿಯಿಂದ ಜೂನ್ ತಿಂಗಳಾವಧಿಯಲ್ಲಿ 2-4 ಮೊಟ್ಟೆಗಳನ್ನಿಟ್ಟು ಮರಿಮಾಡುತ್ತದೆ. ಮರದ ಪೊಟರೆಯಲ್ಲಿ ಗೂಡು ಮಾಡಿಕೊಳ್ಳುತ್ತದೆ. ಮೀನು ಇದರ ಪ್ರಮುಖ ಆಹಾರ. ಭಾರತ, ಶ್ರೀಲಂಕಾ, ಬಾಂಗ್ಲಾದಲ್ಲಿ ಜಾಸ್ತಿ.

Monday, May 25, 2009

ಅರೆ ರೆರೆರೆರೆರೆ ತರಗಲೆ ನೆಲಗುಟುರ...ಗಾಬರಿಯಾದರೆ ಕೈಸಿಗದು. ಪುಕ್ಕಲು ಸ್ವಭಾವ. ಕ್ಷಣಾರ್ಧದಲ್ಲಿ ಮಾಯ ವಾಗಬಲ್ಲ ಸಾಮರ್ಥ್ಯ. ನೆಲದ ಮೇಲೆ ಚೆಂಡು ಉರುಳುತ್ತಿದೆಯೇನೋ ಎನ್ನುವಂತೆ ಓಡಾಟ. ಗಂಡು-ಹೆಣ್ಣಿಗೆ ಮೈಬಣ್ಣದಲ್ಲಿ ಮಾತ್ರ ವ್ಯತ್ಯಾಸ. ತರಗಲೆಗಳ ಮಧ್ಯೆ ಸದ್ದಿಲ್ಲದಂತೆ ಓಡಾಡಿಕೊಂಡಿರುತ್ತದೆ!
ಇಸ್ಟೆಲ್ಲ ಕೇಳಿದ ಮೇಲೆ ಹಳ್ಳಿ ಹೈದನಿಗೆ ಇದು ಯಾವ ಹಕ್ಕಿ ಇರಬಹುದು ಎಂದು ಬೇಗ ನೆನಪಾಗಿ ಬಿಡುತ್ತದೆ. ಆದರೆ ಈ ಹಕ್ಕಿಗೆ ಹೀಗೆಂದು ಕರೆಯುತ್ತಾರೆ ಎನ್ನುವುದು ಮಾತ್ರ ಗೊತ್ತಿರುವುದಿಲ್ಲ ಅಸ್ಟೆ. ಆದರೆ ಈಗೀಗ ಈ 'ತರಗಲೆ ನೆಲಗುಟುರ' (White throated ground-thrush) ತೀರ ಅಪರೂಪವಾಗಿಬಿಟ್ಟಿದೆ.
ಕಾಡಿನಲ್ಲಿಯೇ ವಾಸವಾಗಿರುತ್ತಿದ್ದ ಈ ಹಕ್ಕಿಗಳನ್ನು ಈಗ ಗುರುತಿಸಬೇಕೆಂದರೆ ಹರಸಾಹಸ ಪಡಬೇಕು. ಅಂದಹಾಗೆ ಈ ಜಾತಿಗೇ ಸೇರಿದ ಇನ್ನಿತರ ಹಕ್ಕಿಗಳು ಲಭ್ಯ. ತರಗಲೆ ನೆಲಗುಟುರ ಮಾತ್ರ ವಿರಳ. ಪ್ರಾದೇಶಿಕವಾಗಿ ಈ ಹಕ್ಕಿಯನ್ನು ಪಟ್ಟೆ ನೆಲಗುಟುರ, ಒಣಗೆಲೆ ಗುಟುರ, ಎಲೆ ನೆಲಗುಟುರ ಎಂದೆಲ್ಲ ಕರೆಯುತ್ತಾರೆ. ತರಗೆಲೆಗೆ ಕರಾವಳಿಯ ಕೆಲ ಭಾಗದಲ್ಲಿ ದರ್ಕು, ತೆರ್ಕು ಎಂದು ಕರೆಯುವ ಕಾರಣ ಈ ಹಕ್ಕಿಯನ್ನು ಆ ಭಾಗದಲ್ಲಿ ದರ್ಕಲಕ್ಕಿ, ತೆರ್ಕಲಕ್ಕಿ ಎನ್ನುತ್ತಾರೆ.
ಕಾಡುಗಳಲ್ಲಿ ಜೋಡಿಯಾಗಿ ಇರುವ ತರಗಲೆ ನೆಲಗುಟುರ ಗಾಬರಿಯಾದಾಗ ನೆಲಬಿಟ್ಟು ಮರದ ಮೇಲೆ ಸದ್ದು ಮಾಡುತ್ತಾ ಕುಳಿತಿರುತ್ತದೆ. ಗುಬ್ಬಿಗಿಂತ ಸ್ವಲ್ಪ ದೊಡ್ಡದಾಗಿರುವ ಈ ಹಕ್ಕಿ ಗುಂಡುಗುಂಡಾಗಿದ್ದು ಬಾಲ ಮೊಟಾಗಿರುತ್ತದೆ. ಕಂಡು ಕಾಲುಗಳು ಉದ್ದ. ಕೊಕ್ಕು ಚಿಕ್ಕದಾಗಿದ್ದು, ಬೂದು ಮಿಶ್ರಿತ ಕೇಸರಿ ಬಣ್ಣದಿಂದಿರುತ್ತದೆ. ತೇವಾಂಶವಿರುವ ಜಾಗಗಳಲ್ಲಿ ಕೀಟಗಳ ಬೇಟೆಗಾಗಿ ಕುಳಿತಿರುತ್ತದೆ. ಹಸಿರು ಮಿಶ್ರಿತ ನೀಲಿ ರೆಕ್ಕೆಗಳು, ಕಣ್ಣ ಕೆಳಗಿನ ಪಟ್ಟಿ ಮತ್ತು ಎದೆ-ಹೊಟ್ಟೆ ಭಾಗದ ಕೇಸರಿ ಮಿಶ್ರಿತ ಬಣ್ಣವೇ ಸೌಂದರ್ಯದ ಗುಟ್ಟು. ಸೊಕ್ಕೇರಿದರೆ ತರಗಲೆಗಳ ಮಧ್ಯೆ ಮನಸೋ ಇಚ್ಚೆ ಓಡಾಡಿಕೊಂಡಿರುತ್ತದೆ.
ಬೇಸಿಗೆಗಾಳದಲ್ಲಿ ಸಂತಾನೋತ್ಪತ್ತಿಯಲ್ಲಿ ತೊಡಗಿಕೊಳ್ಳುವ ತರಗೆಲೆ ನೆಲಗುಟುರ ಮೇ ಮತ್ತು ಜೂನ್ ತಿಂಗಳಿನಲ್ಲಿ 2-3 ಮೊಟ್ಟೆಗಳನ್ನಿಟ್ಟು ಮರಿಮಾಡುತ್ತದೆ. ಈ ಸಂದರ್ಭದಲ್ಲಿ ಸಿಳ್ಳೆ ಹೊಡೆಯುತ್ತದೆ. (ಚಿತ್ರ ಕೃಪೆ: ಅಂತರ್ಜಾಲ)

Friday, May 8, 2009

ಜುಟ್ಲನ ಜುಟ್ಟು!ಕುಂತಾಗ ಒಂಥರಾ.. ನಿಂತಾಗ ಇನ್ನೊಂಥರಾ...!ವ್ಯಕ್ತಿತ್ವದ ಬಗ್ಗೆ ಹೇಳುವಾಗ 'ಕುಂತಾಗ ಒಂಥರಾ.. ನಿಂತಾಗ ಇನ್ನೊಂಥರಾ' ಎಂದು ಹೇಳು ವುದುಂಟು. ಇಂತದೇ ಸ್ವಭಾವದ ಹಕ್ಕಿ ಇಲ್ಲೊಂದಿದೆ. ಅದೇ ಪಂಜಾಬಿನ ರಾಜ್ಯ ಪಕ್ಷಿ.
ಸೂಕ್ಷ್ಮವಾಗಿ ಗಮನಿಸಿ. ಈ ಹಕ್ಕಿಯ ನೆತ್ತಿಯ ಮೇಲೊಂದು ಸುಂದರವಾದ ಜುಟ್ಟಿದೆ. ಎರಡು ಹಕ್ಕಿಗಳು ಜೊತೆಗೆ ಕುಳಿತಿದ್ದರೆ ಮದುವೆಗೆ ಸಿಂಗರಿಸಿಕೊಂಡು ಕುಳಿತಿರುವ ವಧೂವರರಂತೆ ತೋರುತ್ತದೆ. ಈ ಅರ್ಧ ಚಂದ್ರಾಕಾರದ ಜುಟ್ಟೇ ಈ ಹಕ್ಕಿಯ ವಿಶೇಷ.
ಎಲ್ಲಿಯೇ ಹೋಗಿ ಕುಳಿತರೂ ಈ ಜುಟ್ಟು ತೆರೆದುಕೊಳ್ಳುತ್ತದೆ. ಮತ್ತೆ ಹಾರಲು ಆರಂಭಿಸಿತೆಂದರೆ ಜುಟ್ಟು ಮಾಯವಾಗಿಬಿಡುತ್ತದೆ. ಹಾರಾಟಕ್ಕೆ ತೊಂದರೆ ಆಗದಂತೆ ಜುಟ್ಟನ್ನು ಹಿಂದಕ್ಕೆ ಭಾಗಿಸಿಕೊಳ್ಳುತ್ತದೆ. ಆದರೆ ಕುಳಿತುಕೊಳ್ಳುವಾಗ ಮಾತ್ರ ತೆರೆದುಕೊಳ್ಳಲೇ ಬೇಕು. ಇದೇ ಈ 'ಜುಟ್ಲ ಹಕ್ಕಿ' ಅರ್ಥಾತ್ ...... ಜುಟ್ಟಿನ ವಿಶೇಷ.
ಇಸ್ಟೇ ಅಲ್ಲ, ಜುಟ್ಲಹಕ್ಕಿಯ ಕೂಗಿನಲ್ಲೂ ಕೆಲವು ವಿಶೇಷ ಕಾಣಬಹುದು. ಒಮ್ಮೊಮ್ಮೆ ಉಪ್ಪಿಪ್ಪೂ...ಉಪ್ಪೋ ಎಂದು ಕೇಳಿಸಿದರೆ, ಕೆಲವೊಮ್ಮೆ ಹ್ಹು..ಹ್ಹು ಎಂದು ನಕ್ಕಂತೆ ಇರುತ್ತದೆ.
ಹಾರುವಾಗ ಜುಟ್ಲನ ದೇಹದ ಮೇಲ್ಭಾಗ ಪ್ಯಾರಾಚುಟ್ ನಂತೆ ತೋರುತ್ತದೆ. ಕುರುಚಲು ಕಾಡುಗಳಲ್ಲಿ ವಾಸವಾಗಿರುವ ಜುಟ್ಲನನ್ನು ಬಾಸಿಂಗ, ಬಸವನಕೋಡು, ಜುಟ್ಲಕ್ಕಿ, ಚಂದ್ರಮುಕುಟ ಎಂದೆಲ್ಲ ಕರೆಯುತ್ತಾರೆ. ಗೊರವಂಕ ಹಕ್ಕಿಯಸ್ಟೇ ಇರುವ ಈ ಹಕ್ಕಿ ಕಂದು ಬಣ್ಣದಿಂದಿರುತ್ತದೆ. ರೆಕ್ಕೆ ಮತ್ತು ಬಾಲ ಬಿಳಿಯದಾದ ಪಟ್ಟಿಗಳಿಂದ ಕೂಡಿರುತ್ತದೆ. ಕೊಕ್ಕು ಸೂಜಿಯಂತೆ ಇದ್ದು, ಕತ್ತಿಗಿಂತ ಉದ್ದವಾಗಿರುತ್ತದೆ. ಕಣ್ಣು ಕಪ್ಪಗಾಗಿರುತ್ತದೆ. ಜುಟ್ಟಿನ ತುದಿಯಲ್ಲಿ ಕಪ್ಪು ಪಟ್ಟಿಗಳು ಇರುತ್ತವೆ. ಹೊಟ್ಟೆ ಭಾಗದಿಂದ ಕೆಳಕ್ಕೆ ಬೆಳ್ಳಗಿರುತ್ತದೆ.
ಪೊಟರೆ, ಹಾಳುಬಿದ್ದ ಕಟ್ಟಡಗಳ ಛಾವಣಿಗಳಲ್ಲಿ ಗೂಡು ಮಾಡಿಕೊಳ್ಳುವ ಜುಟ್ಲ ಹಕ್ಕಿ ಜನವರಿಯಿಂದ ಜುಲೈ ತಿಂಗಳಿನ ಅವಧಿಯಲ್ಲಿ 5 ರಿಂದ 6 ಮೊಟ್ಟೆಗಳನ್ನಿಟ್ಟು ಮರಿಮಾಡುತ್ತದೆ. 15 ರಿಂದ 20 ದಿನ ಕಾವು ನೀಡುತ್ತದೆ. ಈ ಹಕ್ಕಿಯನ್ನು ರಾಜ್ಯದ ಎಲ್ಲೆಡೆ ನೋಡಲು ಸಾಧ್ಯ.
ದೇವರಾಯನ ದುರ್ಗಾ, ಸಾವನದುರ್ಗಗಳಲ್ಲಿ ಜಾಸ್ತಿ. ಪಾಕಿಸ್ತಾನ್, ಬಾಂಗ್ಲ, ಲಂಕಾಗಳಲ್ಲಿಯೂ ಇವೆ. ಹಣ್ಣು, ಹಲ್ಲಿ, ಚೇಳು, ಇಲಿ, ಇರುವೆ ಇವುಗಳೇ ಈ ಹಕ್ಕಿಯ ಆಹಾರ.

Saturday, May 2, 2009

ಜಗಳ ಗಂಟಿ 'ಕೋಮಲ ಬದನಿಕೆ'ಹಲವರಿಗೆ ಹೂವಿನ ಮೇಲೆ ವಿಪರೀತ ವ್ಯಾಮೋಹ. ಅವರಲ್ಲೇ ಕೆಲವರು ದಿನ ಬೆಳಗಾದರೆ ಹೂವಿಗಾಗಿ ಇನ್ನೊಬ್ಬರ ಮನೆಯ ಬೇಲಿ ಹಾರಿ ಕಿತ್ತು ತರುವವರೂ ಇದ್ದಾರೆ.
ಈ ಹಕ್ಕಿ ಕೂಡ ಇದೇ ಜಾತಿಗೆ ಸೇರಿದ್ದು. ತನ್ನ ಪಕ್ಕದಲ್ಲೇ ಇರುವ ಹೂವಿನ ಮಕರಂದ ಅಥವಾ ಹಣ್ಣುಗಳನ್ನು ಆ ಕ್ಷಣವೇ ತಿನ್ನಲು ಹೋಗುವುದಿಲ್ಲ. ತನ್ನ ಜಾತಿಗೆ ಸೇರಿದ ಇನ್ನೊಂದು ಹಕ್ಕಿ ಇರುವಲ್ಲಿಗೆ ಹೋಗಿ ಕದ್ದು ತರುತ್ತದೆ. ಅಥವಾ ಅಲ್ಲಿರುವ ಜಾತಿ ಹಕ್ಕಿಯ ಜತೆಗೆ ಜಗಳವಾಡಿಯಾದರೂ ಕಿತ್ತು ತಿನ್ನುತ್ತದೆ.
ಹೆಸರು 'ಕೋಮಲ ಬದನಿಕೆ'(Plan Flowerpecker) .
ಲೋರಾಂಥೇಸಿ ಕುಟುಂಬಕ್ಕೆ ಸೇರಿದ ಹಕ್ಕಿ. ಕೋಮಲ ಬದನಿಕೆಯನ್ನು ಪೇಲವ ಬದನಿಕೆ, ಪಾಚಿ ಚುಂಡಕ್ಕಿ, ಹೂ ಚುಂಡಕ್ಕಿ ಎಂದೂ ಕರೆಯುತ್ತಾರೆ. ಎಲೆಗಳ ಮಧ್ಯದಲ್ಲೆಲ್ಲೋ ಕುಳಿತಿದ್ದರೆ ಗುರುತಿಸಲು ಸಾದ್ಯವೇ ಇಲ್ಲ. ಅಜ್ಜಪ್ಪ ಎಂದರೂ ಸದ್ದು ಮಾಡುವುದಿಲ್ಲ. ಇನ್ನು ನೋಡಲು ಹೆಚ್ಚುಕಡಿಮೆ ಎಲೆಯದೆ ಬಣ್ಣ.
ತಿಳಿ ಹಸಿರು, ಕಡು ಮಿಶ್ರಿತ ಬೂದು ಬಣ್ಣದಿಂದ ಇರುತ್ತದೆ. ಕಾಲುಗಳು ಮತ್ತು ಕೊಕ್ಕು ಹಳದಿ ಮಿಶ್ರಿತ ಬೂದು ಬಣ್ಣದಿಂದಿರುತ್ತೆ. ಒಟ್ಟಾರೆಯಾಗಿ ಇಡೀ ದೇಹ ಬೂದು. ಚೀಕ್....ಚಿಕ್ ಎಂದು ಸದ್ದು ಮಾಡುತ್ತಿರುತ್ತದೆ.
ಕುರುಚಲು ಕಾಡು, ತೋಟಗಳಲ್ಲಿ ಹೆಚ್ಚು ಹೆಚ್ಚು ವಾಸವಾಗಿರುವ ಈ ಬದನಿಕೆ ಹಕ್ಕಿಯ ಬಾಲ ಮೋಟಾಗಿರುತ್ತದೆ. ಹೆಚ್ಚು ಕಡಿಮೆ ಗುಬ್ಬಚ್ಚಿಯಸ್ಟೆ ಗಾತ್ರದ ಕೋಮಲ ಬದನಿಕೆ ಫೆಬ್ರವರಿಯಿಂದ ಜುಲೈ ತಿಂಗಳಾವಧಿಯಲ್ಲಿ 2-3 ಬಿಳಿಯದಾದ ಮೊತ್ತೆಗಳನ್ನಿಟ್ಟು 16 ರಿಂದ 22 ದಿನಗಳ ಕಾಲ ಕಾವು ನೀಡಿ ಮರಿಮಾಡುತ್ತದೆ.
ಸಂತಾನೋತ್ಪತ್ತಿಯ ವೇಳೆಯಲ್ಲಿ ಗೂಡು ಮಾಡಿಕೊಳ್ಳುತ್ತದೆ. ಕೋಮಲ ಬದನಿಕೆಯನ್ನು ಬಾಂಗ್ಲ, ಶ್ರೀಲಂಕಾಗಳಲ್ಲಿಯೂ ಕಾಣಲು ಸಾಧ್ಯ. ಕರ್ನಾಟಕದ ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಜಾಸ್ತಿ. ಹಣ್ಣು, ಹೂವಿನ ಮಕರಂದವೇ ಈ ಹಕ್ಕಿಯ ಪ್ರಮುಖ ಆಹಾರ.