Monday, August 24, 2009

ಚಿಕ್ ಚೀಕ್ ಕಿರುರೆಕ್ಕೆ ಹಕ್ಕಿಲವು ಮಂದಿ ನಾಲ್ಕು ಗೋಡೆಯಿಂದ ಆಚೆ ಬರಲು ಬಯಸುವುದಿಲ್ಲ. ಕೆಲವರು ಯಾವುದೋ ಅನಿವಾರ್ಯತೆಯಿಂದ ಒಳಸೇರಿಕೊಂಡಿದ್ದರೆ, ಇನ್ನೂ ಕೆಲವರು ಜನ ಸೇರಿದ್ದಾರೆಂದು ಕೋಣೆಯಿಂದ ಹೊರ ಬರುವದೇ ಇಲ್ಲ. ಅದೇನೋ ಒಂದು ರೀತಿಯ ಭಯ, ನಾಚಿಕೆ, ಹಿಂಜರಿಕೆ.
ಇಂಥ ಸ್ವಭಾವ ಕೇವಲ ಮನುಷ್ಯರಲ್ಲಷ್ಟೇ ಅಲ್ಲ. ಪ್ರಾಣಿ-ಪಕ್ಷಿಗಳಲ್ಲಿಯೂ ಕಾಣಲು ಸಾದ್ಯ.
'ಕಿರುರೆಕ್ಕೆ ಹಕ್ಕಿ', 'ಬಿಳಿಹೊಟ್ಟೆ ಹಕ್ಕಿ', 'ಬಿಳಿಹೊಟ್ಟೆ ಸಣ್ಣರೆಕ್ಕೆ' ಅರ್ಥಾತ್ ( While Billed - Shortwing) ಕೂಡ ಇದೇ ಸ್ವಭಾವದ ಹಕ್ಕಿ. ಒಂಥರಾ ನಾಚಿಕೆ, ಭಯಪಡುವ ಸ್ವಭಾವ. ತನ್ನಿಂದ ದೊಡ್ಡ ಗಾತ್ರದ ಹಕ್ಕಿ, ಪ್ರಾಣಿ ಅಥವಾ ಮನುಷ್ಯರನ್ನು ಕಂಡಾಗಲೆಲ್ಲ ಪೊದೆಯೊಳಗೆ ಅಥವಾ ತನ್ನ ಗೂಡಿನೊಳಗೆ ಸೇರಿಕೊಳ್ಳುತ್ತದೆ. ನೀವೂ ಈ ಹಕ್ಕಿಯನ್ನೇ ಹಿಂಬಾಲಿಸಿದಿರಿ ಎಂದುಕೊಳ್ಳಿ. ಆಗ ನಿಮ್ಮ ಕಣ್ಣಿಗೇ ಕಾಣದಂತೆ ಎಲ್ಲೋ ಕಣ್ಮರೆಯಾಗುತ್ತದೆ. ಪೊದೆಯೊಳಗೇ ಒಂದು ಕೊಂಬೆಯಿಂದ ಇನ್ನೊಂದು ಕೊಂಬೆಗೆ ಹಾರುತ್ತ ನೂರಾರು ಮಾರು ದೂರಕ್ಕೆ ಸಾಗಿರುತ್ತದೆ.
ಹೌದು, ಈ ಪುಟ್ಟ ಹಕ್ಕಿ ಜಂಪ್ ಮಾಡುವುದರಲ್ಲಿ ಪ್ರವೀಣ. ಹೆಚ್ಚುಕಡಿಮೆ ಗುಬ್ಬಚ್ಚಿಯಸ್ಟೆ ಗಾತ್ರ ಇರುವ ಕಾರಣ ಸುಲಭವಾಗಿ ಜಂಪ್ ಮಾಡುತ್ತದೆ. ನೋಡಲು ನೋಡಲು ಚೆಂಡಿನಂತ ದೇಹ. ಬಹುತೇಕ ಭಾಗ ಕಪ್ಪು ಮಿಶ್ರಿತ ನೀಲಿಬಣ್ಣ. ಕೊಕ್ಕು ಮತ್ತು ಕಾಲುಗಳು ಕಪ್ಪು. ಇನ್ನು ಹೊಟ್ಟೆ ಮತ್ತು ಎದೆಯ ಭಾಗದಲ್ಲಿ ಹಳದಿ ಮಿಶ್ರಿತ ಬಿಳಿಬಣ್ಣ. ಚಿಕ್ಕದಾದ ಎರಡು ರೆಕ್ಕೆಗಳಿಂದಲೇ ಈ ಹಕ್ಕಿಯನ್ನು ಗುರುತಿಸಲು ಸಾಧ್ಯ.
ಭಾರತ ಸೇರಿದಂತೆ ನೆರೆಯ ಲಂಕಾ, ಬಾಂಗ್ಲ, ಪಾಕಿಸ್ತಾನಗಳಲ್ಲಿಯೂ ನೋಡಲು ಸಾಧ್ಯ. ಮಾರ್ಚ್ ನಿಂದ ಜೂನ್ ತಿಂಗಳಾವಧಿಯಲ್ಲಿ 2-3 ಮೊಟ್ಟೆಗಳನ್ನಿಟ್ಟು ಮರಿಮಾಡುತ್ತದೆ. ಜಿಟಿಜಿಟಿ ಮಳೆ ಇದ್ದ ಸಂದರ್ಭದಲ್ಲಿ ಮೈ ಮುದುಡಿ ಕುಳಿತಿರುವಾಗ ಮುದ್ದು ಮುದ್ದಾಗಿರುತ್ತದೆ.
ಗಾಬರಿಯಾದಾಗ ಸಾಮಾನ್ಯವಾಗಿ ಚಿಕ್ ಚೀಕ್...ಎಂದು ಸದ್ದು ಮಾಡುತ್ತದೆ.
ಚಿತ್ರ: ಅಂತರ್ಜಾಲ.

Sunday, August 9, 2009

ಕೆಂಪು ಕೊಕ್ಕಿನ ಕಪ್ಪು ಕೊಕ್ಕರೆಹೆಸರು ಮಾತ್ರ ಕರಿ ಕೊಕ್ಕರೆ. ಆದರೆ ಆ ಕಪ್ಪಿನಲ್ಲೂ ಸೌಂದರ್ಯ ಇಟ್ಟಿದ್ದಾನೆ ಸೃಷ್ಟಿಕರ್ತ. ಕಪ್ಪು ಬಣ್ಣದಲ್ಲೂ ಸೌಂದರ್ಯವಿದೆ ಎನ್ನುವುದನ್ನು ತೋರಿಸಲಿಕ್ಕಾಗಿಯೇ ಅದನ್ನು ಸರಿದೂಗಿಸುವ ಕೆಂಪು, ತೆಳುಗೆಂಪು ಮತ್ತು ಬಿಳಿಬಣ್ಣ ನೀಡಿದ್ದಾನೆ.
ಈ 'ಕಪ್ಪು ಕೊಕ್ಕರೆ' (Black Stork )ಯ ದೇಹದ ಬಹುತೇಕ ಭಾಗ ಕಪ್ಪಗಾಗಿದ್ದರೂ ಕೊಕ್ಕು ಮತ್ತು ಕಾಲುಗಳಿಗೆ ಮಾತ್ರ ಕೆಂಪು ಬಣ್ಣ. ಎದೆ, ಹೊಟ್ಟೆ ಭಾಗ ಬೆಳ್ಳಗಾಗಿರುತ್ತದೆ. ಇದರಿಂದಾಗಿ ಕಪ್ಪು ಕೊಕ್ಕರೆಗೆ ವಿಭಿನ್ನ ಸೌಂದರ್ಯ.
ವಯ್ಯಾರದ ನಡಿಗೆಯಲ್ಲಿ ಈ ಕಪ್ಪು ಕೊಕ್ಕರೆ ಜನಪ್ರಿಯ. ಮೊಣಕಾಲನ್ನು ಒಂದಕ್ಕೊಂದು ಬಡಿದುಕೊಳ್ಳುತ್ತಾ ನಿಧಾನಗತಿಯಲ್ಲಿ ಹೆಜ್ಜೆ ಹಾಕಿ ನಡೆಯುತ್ತಿದ್ದರೆ ನೀರಂಚಿನಲ್ಲಿ ಅಪ್ಸರೆ.
ಇನ್ನೊಂದು ವಿಚಾರ, ಈ ಹಕ್ಕಿ ಅಂತಿಂಥ ಕೊಕ್ಕರೆಯಲ್ಲ. ಇನ್ನುಳಿದ ಕೊಕ್ಕರೆಗಳಿಗಿಂತ ಭಿನ್ನ. ಹೆಚ್ಚು ಕಡಿಮೆ ಒಂದು ಮೀಟರ್ ನಷ್ಟು ಎತ್ತರಕ್ಕೆ ಬೆಳೆಯುತ್ತದೆ. ಎರಡೂ ರೆಕ್ಕೆಗಳನ್ನು ಅಗಲಿಸಿದರೆ ಒಂದೂವರೆ ಮೀಟರ್ ಗೂ ದೊಡ್ಡದಾದ ಹಕ್ಕಿ ಇದು. ಮೂರರಿಂದ ನಾಲ್ಕು ಕೆಜಿಯಸ್ಟು ತೂಗುವ ತನ್ನ ದೇಹವನ್ನು ಹೊತ್ತು ಅಲೆದಾಡುವುದೆಂದರೆ ಇದಕ್ಕೆ ಸ್ವಲ್ಪ ಆಲಸ್ಯ. ಆದರೂ ಕೆಸರು ಕೆರೆಯಲ್ಲಿ ಆಹಾರಕ್ಕಾಗಿ ದಿನವೆಲ್ಲ ಬೇಟೆಯಾಡುತ್ತದೆ.
ವಿಶೇಷವೆಂದರೆ ಕರಿ ಕೊಕ್ಕರೆಗೆ ಗ್ರಹಣ ಶಕ್ತಿ ಜಾಸ್ತಿ. ಅದೆಸ್ಟೇ ದೂರದಲ್ಲಿ ತನಗೆ ಕಿರಿಕಿರಿ ಆಗುವಂತ ಸಪ್ಪಳವಾದರೂ ತಟ್ಟನೆ ಕೂಗಿಕೊಳ್ಳುತ್ತದೆ. ತನ್ನನ್ನು ತಾನು ರಕ್ಷಿಸಿಕೊಳ್ಳುವ ಜಾಗಕ್ಕೆ ಸೇರಿಕ್ಕೊಳ್ಳುತ್ತದೆ. ಭೇಟೆಗಾಗಿ ಎಲ್ಲೆಲ್ಲಿಗೋ ಪ್ರಯಾಣ ಬೆಳೆಸುತ್ತದೆ. ದಿನಕ್ಕೆ 250 ರಿಂದ 300 ಕಿ.ಮೀ ದೂರಕ್ಕೆ ಕ್ರಮಿಸುವ ಸಾಮರ್ಥ್ಯ ಈ ಹಕ್ಕಿಗಿದೆ.
ಸಾಮಾನ್ಯವಾಗಿ ಚಳಿಗಾಲದಲ್ಲಿ ಸಂತಾನೋತ್ಪತ್ತಿ ಕಾರ್ಯದಲ್ಲಿ ತೊಡಗಿಕೊಳ್ಳುತ್ತದೆ. ಒಮ್ಮೆ 2-4 ಮೊಟ್ಟೆಗಳನ್ನಿಟ್ಟು ಮರಿಮಾಡುತ್ತದೆ. ಚಾಳಿಗಾಲದಲ್ಲಿ ವಲಸೆ ಹೋಗುತ್ತಿರುತ್ತದೆ. ಈ ಹಕ್ಕಿ ಭಾರತದ ಕೆಲವು ಭಾಗದಲ್ಲಿ ಕಾಣಸಿಗುತ್ತದೆಯಾದರೂ ಅಪರೂಪ. ಕೆರೆಗಳಲ್ಲಿರುವ ಏಡಿ, ಮೀನು, ಕಪ್ಪೆಗಳೇ ಇದರ ಆಹಾರ.
ಚಿತ್ರ ಕೃಪೆ: ಅಂತರ್ಜಾಲ

Sunday, August 2, 2009

ವೇಗದೂತ ಇದು 'ಕೆಂಗತ್ತಿನ ಸೂರಕ್ಕಿ'ವೇಗಕ್ಕೆ ಹೆಸರಾದ ಹಕ್ಕಿಗಳ ಪಟ್ಟಿಯಲ್ಲಿ ಈ ಜಾತಿಯ ಹಕ್ಕಿ ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ಸೆಕೆಂಡಿಗೆ ಎರಡು ಹೂವುಗಳ ಮಕರಂದವನ್ನಾದರೂ ಹೀರುವ, ನಿಮಿಷಕ್ಕೆ ಕಿಲೋ ಮೀಟರ್ ದೂರಕ್ಕೆ ಕ್ರಮಿಸಬಲ್ಲ ಹಾರಾಟದ ಸಾಮರ್ಥ್ಯ ಈ ಹಕ್ಕಿಯದು.
ಇಸ್ಟೇ ಅಲ್ಲ ಪ್ರತಿ ಸೆಕೆಂಡಿಗೆ ಹತ್ತು-ಹನ್ನೆರಡು ಬಾರಿ ರೆಕ್ಕೆ ಬಡಿದುಕೊಂಡಿರುತ್ತದೆ. ಇಂಥ ವೈಶಿಷ್ಟ್ಯಗಳಿರುವ ಹಕ್ಕಿಗಳಾದ ಸೂರಕ್ಕಿ ಜಾತಿಯಲ್ಲೇ ಬೇರೆ ತಳಿಯ ಹಕ್ಕಿ ಇದು. ಈ ಹಕ್ಕಿಯನ್ನು 'ಕೆಂಗತ್ತಿನ ಸೂರಕ್ಕಿ' (Crimson Sunbird) ಎಂದು ಕರೆಯುತ್ತಾರೆ.
ಗಾತ್ರದಲ್ಲಿ ಚಿಕ್ಕ ಹಕ್ಕಿ ಇದು. ಹೆಚ್ಚೆಂದರೆ 10 ರಿಂದ 11 ಸೆ. ಮೀಟರ್ ಉದ್ದ ಇರುತ್ತದೆಯಸ್ಟೆ. ಹಾಗಂತ ದಪ್ಪವಾಗಿಯೂ ಬೆಳೆಯುವುದಿಲ್ಲ. ಕಾಲಿನ ಹೆಬ್ಬೆರೆಳಿನಸ್ಟು ಗಾತ್ರದಲ್ಲಿರುತ್ತದೆ. ಕತ್ತಿನ ಭಾಗ ಕೆಂಪಗಾಗಿರುವ ಕಾರಣ ಇದನ್ನು ಕೆಂಗತ್ತಿನ ಸೂರಕ್ಕಿ ಎಂದು ಕರೆದಿದ್ದಾರೆ. ಪ್ರಾದೇಶಿಕವಾಗಿ ಇದಕ್ಕೆ ಕೆಂಪು ಕತ್ತಿನ ಹೂವಕ್ಕಿ ಎಂದೂ ಕರೆಯುವವರಿದ್ದಾರೆ. ಕರವೀರ ಜಾತಿ ಹೂವಿನ ಮಾಕರಂದಕ್ಕಾಗಿ ಬರುವ ಕಾರಣ 'ಕೆಂಪು ಕರವೀರ' ಎಂದೂ ಕರೆಯುತ್ತಾರೆ.
ಉಳಿದಂತೆ ಈ ಹಕ್ಕಿಯ ರೆಕ್ಕೆಯ ಹೆಚ್ಚಿನ ಭಾಗ, ಪುಕ್ಕಗಳು ಕಡು ಹಸಿರು, ಕಂದು ಬಣ್ಣದಿಂದ ಇರುತ್ತದೆ. ಇನ್ನುಳಿದ ಸೂರಕ್ಕಿಗಳಿಗೆ ಇರುವಂತೆ ಈ ಹಕ್ಕಿಯ ಕೊಕ್ಕುಮುಳ್ಳಿನಂತೆ ಇದ್ದು, ತುದಿಯಲ್ಲಿ ಕೆಳಕ್ಕೆ ಬಾಗಿರುತ್ತದೆ. ಕೊಕ್ಕು ಮತ್ತು ಕಾಲು ಕಪ್ಪಗಾಗಿರುತ್ತದೆ. ಹೂವಿನ ಮಕರಂದ ಹೀರುವುದರಲ್ಲಿ ಈ ಹಕ್ಕಿಯಸ್ಟು ನಿಪುಣ ಹಕ್ಕಿ ಇನ್ನೊಂದಿಲ್ಲ. ಸೂರ್ಯ ಮೂಡುವ ಹೊತ್ತಿನಲ್ಲಿ ಮಕರಂದ ಹೀರುತ್ತಿರುತ್ತದೆ.
ಚೆಂಡಿನಾಕಾರದಲ್ಲಿ ಗೂಡು ಕಟ್ಟಿಕೊಳ್ಳುತ್ತದೆ. ಗೂಡಿಗೆ ಹತ್ತಿ ಮತ್ತು ಜೇಡಿನ ಬಲೆ ಬಳಸಿಕೊಳ್ಳುತ್ತದೆ. ಎಪ್ರಿಲ್-ಜೂನ್ ತಿಂಗಳಿನಲ್ಲಿ ಮೂರರಿಂದ ನಾಲ್ಕು ಮೊಟ್ಟೆ ಇಟ್ಟು ಮರಿಮಾಡುತ್ತದೆ. ಭಾರತ ಸೇರಿದಂತೆ ಸುತ್ತಮುತ್ತಲ ದೇಶಗಳಲ್ಲಿ ಕಾಣಬಹುದು.
ಚಿತ್ರ ಕೃಪೆ: ಅಂತರ್ಜಾಲ