Wednesday, June 24, 2009

ಕರ್ರಗೈತೋ... ದೊಡ್ಡ ನೀರ್ ಮುಳ್ಕ



ನೀರೆ ಇದರ ಸರ್ವಸ್ವ!
ಕಣ್ಣೆದುರು ನೀರಿಲ್ಲದಿದ್ದರೆ ಒಂದೇ ಒಂದು ಕ್ಷಣವನ್ನೂ ಕಳೆಯಲು ಇಸ್ಟಪಡುವುದಿಲ್ಲ. ಹಠಾತ್ ಜಾಗ ಖಾಲಿ ಮಾಡಿಬಿಡುತ್ತದೆ. ಹಾಗಂತ ಬಾತುಕೋಳಿಯಂತೆ ನೀರಿನಲ್ಲಿಯೇ ಮುಳುಗೇಳುತ್ತ ಇರಬೇಕೆಂಬ ಆಸೆಯಾಗಲಿ, ಅನಿವಾರ್ಯತೆಯಾಗಲಿ ಇದಕ್ಕಿಲ್ಲ.
ಬಾತುಕೋಳಿಗಿಂತ ಭಿನ್ನ. ಕೆರೆ ಭಾಗ ಅಥವಾ ಹಿನ್ನೀರು ಪ್ರದೇಶಗಳಲ್ಲಿ ಇದ್ದೆ ಇರುತ್ತದೆ ಈ "ದೊಡ್ಡ ನೀರ್ ಮುಳ್ಕ" ಅರ್ಥಾತ್ Great Cormorant.
ನೀವು ನಂಬಲಿಕ್ಕೇ ಅಸಾಧ್ಯವಾದ ಒಂದು ವಿಶೇಷತೆ ಈ ಹಕ್ಕಿಯಲ್ಲಿದೆ. ನಾವು ನೀರಲ್ಲಿ ಡೈವ್ ಮಾಡುವಾಗ ಹೇಗೆ ಜಂಪ್ ಮಾಡಿ ಧುಮುಕುತ್ತೇವೋ ಹಾಗೆ ಈ ಹಕ್ಕಿ ಕೂಡ ನೀರಿಗೆ ಬೀಳುವಾಗ ತನ್ನ ದೇಹದ ತೂಕವನ್ನು ಹೆಚ್ಚಿಸಿಕೊಳ್ಳುತ್ತದೆ. ಹೇಗೆ ಸಾಧ್ಯ ಎನ್ನುವುದು ನಿಮ್ಮ ಪ್ರಶ್ನೆ. ಅದಕ್ಕಿಲ್ಲಿದೆ ಉತ್ತರ.
ನೀರಿನಲ್ಲಿರುವ ಮೀನುಗಳನ್ನು ಹಿಡಿದು ತಿನ್ನಲಿ ತನ್ನೆರಡು ರೆಕ್ಕೆಗಳನ್ನು ಜೋರಾಗಿ ಬಡಿದುಕೊಂಡು ದೇಹದಲ್ಲಿರುವ ಗಾಳಿಯನ್ನು ಹೊರಹಾಕುತ್ತ ದೇಹದ ತೂಕ ಹೆಚ್ಚಿಸಿಕೊಳ್ಳುವ ಗುಣ ಇದಕ್ಕಿದೆ. ಕ್ಷಣಾರ್ಧದಲ್ಲೇ ನೀರಿಗೆ ಧುಮುಕಿ ತಾನು ಗುರಿಯಿಟ್ಟ ಜಲಜೀವಿಯನ್ನು ಬೇಟೆಯಾಡುತ್ತದೆ. 3-4 ನಿಮಿಷಗಳ ಕಾಲ ನೀರಿನಲ್ಲಿ ಮುಳುಗಿರುವ ಸಾಮರ್ಥ್ಯ ಇದಕ್ಕಿರುವುದರಿಂದ ಒಂದಲ್ಲ ಒಂದು ಜೀವಿಯನ್ನು ಭೇಟೆಯಾಡಿಯೇ ಮೇಲಕ್ಕೇಳುತ್ತದೆ. ದೇಹದಲ್ಲಿ ಎಣ್ಣೆಯ ಅಂಶ ಇರುವ ಕಾರಣ ದೇಹ ನೀರಿನಲ್ಲಿ ಒದ್ದೆಯಾಗುವುದಿಲ್ಲ.
ಹೆಚ್ಚುಕಡಿಮೆ ಬೆಳ್ಳಕ್ಕಿಯಷ್ಟೇ ಉದ್ದ, ಅಗಲದ ಈ ಹಕ್ಕಿ ಬೂದು, ನೀಲಿ, ಕಂದು ಮಿಶ್ರಿತ ಕಪ್ಪು ಬಣ್ಣದಿಂದ ಇರುತ್ತದೆ. ಮೇಲ್ನೋಟಕ್ಕೆ ಈ ಹಕ್ಕಿಯ ದೇಹ ಬೂದು ಬಣ್ಣದಂತೆಯೇ ತೋರುತ್ತದೆ. ಕತ್ತಿನ ಕೆಳಭಾಗ ಮತ್ತು ಎದೆ ಭಾಗದಲ್ಲಿ ಬಿಳಿ ಬಣ್ಣವಿದ್ದು, ಕಣ್ಣಿನ ಕೆಳಭಾಗದಲ್ಲಿ ಹಳದಿ ಪಟ್ಟಿ ಇರುತ್ತದೆ. ಕಾಲುಗಳು ಮತ್ತು ಕೊಕ್ಕು ಬಲಿಷ್ಠವಾಗಿವೆ.
ಸಾಮಾನ್ಯವಾಗಿ ನೀರಿಗೆ ಸನಿಹದ ಮರಗಳಲ್ಲಿ ಕಡ್ಡಿಗಳನ್ನು ತಂದು ಗೂಡು ಮಾಡಿಕೊಳ್ಳುತ್ತದೆ. ಜೂನ್-ಜನವರಿ ತಿಂಗಳಾವಧಿಯಲ್ಲಿ 3-4 ತಿಳಿ ನೀಲಿ ಮಿಶ್ರಿತ ಮೊಟ್ಟೆಗಳನ್ನಿಟ್ಟು ಮರಿಮಾಡುತ್ತದೆ.
ದೊಡ್ಡ ನೀರುಕಾಗೆ ಎಂದೂ ಕರೆಯಿಸಿಕೊಳ್ಳುವ ಈ ಹಕ್ಕಿಯನ್ನು ದಾಂಡೇಲಿ, ರಂಗನತಿಟ್ಟು, ಗುಡವಿ, ಮಂಡಗದ್ದೆಗಳಲ್ಲಿ ನೋಡಲು ಸಾಧ್ಯ.
ಚಿತ್ರಕೃಪೆ: ಅಂತರ್ಜಾಲ

Tuesday, June 16, 2009

ಮಿರುಗೋ ಕಣ್ಣಿನ ಹಸಿರು ಗುಪ್ಪಿ



ಎತ್ತರದ ಮರದಿಂದ ಪುರ್ ಎಂದು ಹಾರಿ ಹೋಗುವಾಗ ನೋಡಿದರೆ ಯುದ್ಧ ವಿಮಾನ ಟೇಕ್ಆಫ್ ಮಾಡಿದಂತೆ ಇರುತ್ತದೆ. ಎತ್ತರದಿಂದ ನೆಲಕ್ಕಿಳಿದು ಕುಳಿತುಕೊಳ್ಳುವಾಗಲೂ ಅಸ್ಟೆ. ಪೇಪರ್ ವಿಮಾನ ಮಾಡಿ ಮೇಲಕ್ಕೆ ಹಾರಿಸಿದಾಗ ಹೇಗೆ ನೆಲ ಸೇರುತ್ತದೋ ಹಾಗೆ. ತನ್ನೆರಡು ರೆಕ್ಕೆಗಳನ್ನು ಹೊರಕ್ಕೆ ಚಾಚಿಕೊಂಡಿದೆಯೋ ಇಲ್ಲವೋ ಎನ್ನುವಂತೆ ನೆಲಸೇರುತ್ತದೆ.
ಇದನ್ನು ನೋಡಲು ಗದ್ದೆ, ಬಯಲು ಪ್ರದೆಶದಲೆಲ್ಲೋ ಕುಳಿತಿದ್ದರೆ ಖಂಡಿತ ಅಸ್ಟು ಸುಲಭವಾಗಿ ನಿಮ್ಮಿಂದ ಈ ಹಕ್ಕಿಯನ್ನು ಗುರುತಿಸಲು ಸಾದ್ಯವಿಲ್ಲ. ಕಾರಣ ಈ 'ಹಸಿರುಗುಪ್ಪಿ' (Little Green Heron) ಏಕಾಂಗಿ. ಅಸ್ಟೇ ಅಲ್ಲ, ಇನ್ನೇನು ಸೂರ್ಯಸ್ತವಾಗುತ್ತದೆ ಎನ್ನುವಾಗಲೇ ಬೇಟೆಗಾಗಿ ಗೂಡಿನಿಂದ ಹೊರಬೀಳುತ್ತದೆ. ಕತ್ತಲು ಆವರಿಸುತ್ತಿದ್ದಂತೆ ಇದರ ಕಾರ್ಯಾಚರಣೆ ಆರಂಭಗೊಳ್ಳುತ್ತದೆ. ಹೆಚ್ಚುಕಡಿಮೆ ರಾತ್ರಿ ಕೊಕ್ಕರೆಯ ಸ್ವಭಾವದ ಹಕ್ಕಿ ಇದು.
ಕೆರೆ, ಕೆಸರುಗದ್ದೆಗಳಲ್ಲಿ ಇರುವ ಈ ಹಸಿರುಗುಪ್ಪಿ ಜಲಚರಗಳನ್ನೇ ಶಿಕಾರಿಮಾಡಿ ತಿನ್ನುತ್ತದೆ. ಸಿಗಡಿ, ಏಡಿ, ಚಿಕ್ಕ ಚಿಕ್ಕ ಮೀನು ಎಂದರೆ ಈ ಹಕ್ಕಿಗೆ ಪಂಚಪ್ರಾಣ.
ಸಂತಾನೋತ್ಪತ್ತಿಯ ವೇಳೆಯಲ್ಲಿ ಬೆಳ್ಳಕ್ಕಿಗಳಂತೆ ನೆತ್ತಿಯ ಮೇಲೆ ಜುಟ್ಟು ಬರುವುದನ್ನು ಕಾಣಬಹುದು. ಉಳಿದಂತೆ ಈ ಹಸಿರುಗುಪ್ಪಿ ಕೆಸರುಗುಪ್ಪಿಯನ್ನೇ ಹೋಲುತ್ತದೆ. ಬೆನ್ನು ಮತ್ತು ರೆಕ್ಕೆಗಳೆಲ್ಲ ಹಸಿರು ಮಿಶ್ರಿತ ಬಣ್ಣದಿಂದ ಇರುತ್ತದೆ. ಕಾಲುಗಳು, ಕತ್ತು ಮತ್ತು ಹೊಟ್ಟೆಭಾಗ ಹಳದಿ ಮಿಶ್ರಿತ ಬೂದು ಬಣ್ಣ. ಎದೆಭಾಗಗಳಲ್ಲಿ ಕಂದು ಬಣ್ಣದ ಗರಿಗಳೂ ಇರುತ್ತವೆ.
ಜೌಗು, ಹುಲ್ಲುಗಳಿರುವ ಪ್ರದೇಶಗಳಲ್ಲಿ ಜಾಸ್ತಿಯಾಗಿ ಕಂಡುಬರುವ ಈ ಹಕ್ಕಿಯನ್ನು ಹಸಿರ್ಗಪ್ಪು ಬಕ ಎಂದೂ ಕರೆಯುತ್ತಾರೆ.
ಮರಗಳ ಮೇಲೆ ಕಡ್ಡಿಗಳಿಂದ ಗೂಡುಮಾಡಿಕೊಳ್ಳುವ ಹಸಿರುಗುಪ್ಪಿ ಮಾರ್ಚ್-ಆಗಸ್ಟ್ ತಿಂಗಳಾವಧಿಯಲ್ಲಿ 2-5 ಮೊಟ್ಟೆಗಳನ್ನಿಟ್ಟು ಮರಿಮಾಡುತ್ತದೆ. ಹಸಿರುಗುಪ್ಪಿಯ ಕಣ್ಣುಗಳು ತಿಳಿ ಹಳದಿಯಿಂದ ಇದ್ದು ಮಿರುಗುತ್ತವೆ. ಭಾರತದ ಎಲ್ಲಾ ಭಾಗಗಳಲ್ಲಿಯೂ ಇವೆ. ಬಾಂಗ್ಲ, ಲಂಕಾ ಮತ್ತು ಪಾಕಿಸ್ತಾನಗಳಲ್ಲಿಯೂ ಇವೆ.
ಚಿತ್ರಕೃಪೆ: ಚಿಟ್ಟಿ

Tuesday, June 9, 2009

ಕತ್ತಲಲ್ಲಿ ಕಾಣದ ಕರಿಗತ್ತಿನ ರಾಟವಾಳ



ಸೌಮ್ಯ ಸ್ವಭಾವ, ಮೃದು ಮನಸ್ಸು, ಮುದ್ದಾದ ದೇಹ, ಉಣ್ಣೆಯಂಥ ಗರಿಗಳು... ಮುದುಡಿ ಕುಳಿತರೆ ಚೆಂಡು ಇಟ್ಟಂತೆ ತೋರುವ ಅಪರೂಪದ ಹಕ್ಕಿ ಇದು.
ಈ ಹಕ್ಕಿ ಮತ್ತು ಮೆತ್ತಗೆ ಗದರಿದರೂ ಅಳುವ ಮಗುವಿಗೂ ಹೆಚ್ಚೇನು ವ್ಯತ್ಯಾಸವಿಲ್ಲ. ನೀವು ಜೋರಾಗಿ ಕೂಗಾಡಿಕೊಳ್ಳುತ್ತಿದ್ದೀರಿ ಎಂದರೆ ಆ ಪ್ರದೇಶಕ್ಕೆ ಮುಖವನ್ನೇ ಹಾಕುವುದಿಲ್ಲ. ಆ ಜಾಗದಿಂದ ನೂರಾರು ಮೀಟರ್ ದೂರದಲ್ಲಿಯೇ ಇರುತ್ತದೆ. ಅದರಲ್ಲೂ ಒಮ್ಮೆ ಇಂಥ ಕೂಗಾಟ ಕೆಳಿಸಿತೆಂದರೆ ಸಣ್ಣ ಗಲಾಟೆಯಾದರೂ ಎಲೆ ಮರೆಯಲ್ಲೆಲ್ಲೋ ಕುಳಿತು ಕಾಲ ಕಳೆಯುತ್ತದೆ.
ಇದು ಈ 'ಕರಿಗತ್ತಿನ ರಾಟವಾಳ' (Black-throated Munia) ಹಕ್ಕಿಯ ವಿಶೇಷ.
ಈ ಹಕ್ಕಿ ಗೂಡು ಕಟ್ಟಿಕೊಳ್ಳುವ ರೀತಿಯೂ ನಮ್ಮನ್ನು ಅಚ್ಚರಿಗೊಳಿಸುತ್ತದೆ. ಸಂತಾನೋತ್ಪತ್ತಿಯ ಸಮಯದಲ್ಲಿ ಚೆಂಡಿನಾಕಾರದ ಹತ್ತಿ, ನಾರಿನ ಮೃದುವಾದ ಗೂಡು ಕಟ್ಟಿಕೊಳ್ಳುತ್ತದೆ. ಗೂಡಿನ ಒಳಗೆ ಹಾಸಿಗೆ ಮೆತ್ತಗಾಗಿರಬೇಕೆಂದು ಹತ್ತಿಯನ್ನು ತಂದು ಜೇಡನ ಬಲೆಯಿಂದ ರಚಿಸಿಕೊಳ್ಳುತ್ತದೆ. ಗೂಡು ಕುಸಿಯ ಬಾರದು ಎನ್ನುವ ಕಾರಣ ಹೊರಭಾಗದಲ್ಲೂ ಜೇಡನ ಬಲೆಯನ್ನು ಬಳಸಿಕೊಳ್ಳುತ್ತದೆ.
ಕತ್ತು ಕಪ್ಪಗಾಗಿರುವ ಕಾರಣಕ್ಕಾಗಿಯೇ ಈ ಹಕ್ಕಿಗೆ ಈ ಹೆಸರು.
ಕರಿಗತ್ತಿನ ರಾಟವಾಳ ಜೂನ್-ನವೆಂಬರ್ ತಿಂಗಳಾವಧಿಯಲ್ಲಿ 3 ರಿಂದ 4 ಮೊಟ್ಟೆಗಳನ್ನು ಇಟ್ಟು ಮರಿಮಾಡುತ್ತದೆ. ನೋಡಲು ಹೆಚ್ಚು ಕಡಿಮೆ ಗುಬ್ಬಿಯಂತೆ ಇರುತ್ತದೆ. ಕತ್ತು, ತಲೆ, ರೆಕ್ಕೆಯ ಕೆಳಭಾಗ ಮತ್ತು ಪುಕ್ಕದ ತುದಿಯಲ್ಲಿ ಕಂದು ಮಿಶ್ರಿತ ಕಪ್ಪು. ಬೆನ್ನಿನ ಭಾಗದಲ್ಲಿ ಕಂದು ಬಣ್ಣ ಜಾಸ್ತಿಯಿರುತ್ತದೆ. ಕೊಕ್ಕು ಮತ್ತು ಕಾಲುಗಳು ಕಪ್ಪಗಾಗಿರುತ್ತದೆ. ಹೊಟ್ಟೆ ಮತ್ತು ಪುಕ್ಕದ ಕೆಳಭಾಗ ಬೆಳ್ಳಗಿರುತ್ತದೆ.
ಸಾಮಾನ್ಯವಾಗಿ ಹುಲ್ಲುಗಳಿರುವ ಪ್ರದೇಶಗಳಲ್ಲಿ ಕೀಟಗಳನ್ನು ಹಿಡಿದು ತಿನ್ನುತ್ತಿರುತ್ತದೆ. ತಣ್ಣನೆಯ ಗಾಳಿಯಿದ್ದರೆ ಈ ಹಕ್ಕಿಗೆ ಖುಷಿಯೂ ಖುಷಿ. ಲಂಕಾದಲ್ಲಿ ಜಾಸ್ತಿ. ಭಾರತ, ಬಾಂಗ್ಲಾದಲ್ಲೂ ಇವೆ. ಚಿತ್ರ ಕೃಪೆ: ಅಂತರ್ಜಾಲ.

Friday, June 5, 2009

ಕುಂಬ್ಳೆಯ "ಡ್ರೀಮ್ ಸಫಾರಿ"





ರಿಸರ ದಿನಾಚರಣೆ ಸ್ಪೆಷಲ್ ಆಗಿ ಪೋಟೋ ಗ್ರಾಫರ್ ದಿನೇಶ್ ಕುಂಬ್ಳೆ ತಮ್ಮ ದಕ್ಷಿಣಆಫ್ರಿಕ ಪ್ರವಾಸದಲ್ಲಿ ಸೆರೆಹಿಡಿದ ಛಾಯಾ ಚಿತ್ರಗಳ ಸಂಗ್ರಹವನ್ನು ಪುಸ್ತಕ ರೂಪದಲ್ಲಿ ಹೊರ ತಂದಿದ್ದಾರೆ. ಸಹೋದರ, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ ಗುರುವಾರ ಬೆಂಗಳೂರಿನಲ್ಲಿರುವ 'ಲ್ಯಾಂಡ್ ಮಾರ್ಕ್' ಪುಸ್ತಕ ಮಳಿಗೆಯಲ್ಲಿ ಬಿಡುಗಡೆ ಮಾಡಿದರು.

" ಡ್ರೀಮ್ ಸಫಾರಿ"
ಆಥರ್: ದಿನೇಶ್ ಕುಂಬ್ಳೆ
ಪೇಜಸ್: 224
ಪ್ರೈಸ್: 2,250
(ರಿಯಾಯತಿಯಲ್ಲಿ 1,750)


ಪುಸ್ತಕದ ವಿಶೇಷತೆ
1. ತ್ಯಾಜ್ಯ ವಸ್ತುಗಳಿಂದ ತಯಾರಾದ ಪೇಪರ್ ಬಳಸಿ ಪ್ರಿಂಟ್ ಮಾಡಲಾಗಿದೆ. ಪರಿಸರ ಜಾಗ್ರತಿಯ ಸಂದೇಶವನ್ನು ಈ ಪುಸ್ತಕ ರವಾನಿಸಿದೆ. 224 ಪುಟಗಳ ಈ ಪುಸ್ತಕದಲ್ಲಿ ಒಟ್ಟು 250 ಛಾಯಾಚಿತ್ರಗಳಿವೆ. ಜತೆಗೆ ದಿನೇಶ್ ಕುಂಬ್ಳೆ ತಮ್ಮ ಅನುಭವಗಳನ್ನು ಬರೆದುಕೊಂಡಿದ್ದಾರೆ.

2. ಬೆಂಗಳೂರಿನ ಕೆಆರ್ಎಬಿ ಮೀಡಿಯಾ ಮತ್ತು ಮಾರ್ಕೆಟಿಂಗ್ ಈ ಪುಸ್ತಕವನ್ನು ಪ್ರಿಂಟ್ ಮಾಡಿಸಿದೆ. ಪ್ರಿಂಟಿಂಗ್ ನಲ್ಲೂ ವಿಶೇಷತೆ ಇದೆ. ಎಚ್ ಪಿ ಕಂಪನಿ ತನ್ನ ಲೇಟೆಸ್ಟ್ ಪ್ರಿಂಟರ್ HP Indigo Digital Offset press ನಲ್ಲಿ ಪ್ರಿಂಟ್ ಮಾಡಿದ್ದು, ಕೇವಲ 5 ನಿಮಿಷದಲ್ಲಿ ಪುಸ್ತಕದ ಎಲ್ಲ ಪುಟಗಳು ಮುದ್ರಣಗೊಂಡಿವೆ.

3. ಕೆನ್ಯಾ, ತಂಜಾನಿಯ, ಪೆರಪ್ಸ್ ಕಾಡುಗಳನ್ನ ಸುತ್ತಿ, ಅಲ್ಲಿಯ ವನ್ಯ ಜೀವಿಗಳ ಬಗ್ಗೆ ಅಧ್ಯಯನ ನಡೆಸಿ, ಛಾಯಚಿತ್ರಗಳನ್ನು ಸೆರೆಹಿಡಿದು, ಅದನ್ನು ಪುಸ್ತಕ ರೂಪದಲ್ಲಿ ತಂದ ಏಕೈಕ ಭಾರತೀಯ ದಿನೇಶ್ ಕುಂಬ್ಳೆ ಆಗಿದ್ದಾರೆ.
ದಿನೇಶ್ ಕುಂಬ್ಳೆ ಅವರ "ಡ್ರೀಮ್ ಸಫಾರಿ" ಪುಸ್ತಕ ವಿಶ್ವದ ಎಲ್ಲಾ 'ಲ್ಯಾಂಡ್ ಮಾರ್ಕ್' ಮಳಿಗೆಗಳಲ್ಲೂ ಲಭ್ಯ. ಈ ಪುಸ್ತಕದ ಬೆಲೆ 2,250 ರುಪಾಯಿ. ನಿಮಗೂ ಈ ಪುಸ್ತಕ ಕೊಂಡುಕೊಳ್ಳುವ ಆಸಕ್ತಿ ಇದ್ದರೆ www.wildlifebeat.comಗೆ ಭೇಟಿ ನೀಡಿ. ಇಲ್ಲಿ ಎಲ್ಲ ಮಾಹಿತಿಗಳೂ ಲಭ್ಯ.
ಅನಿಲ್ ಪ್ರೀತಿಯ ಮಾತು: ಅಣ್ಣ ಮತ್ತು ನಾನು ಸೇರಿಯೇ ಇಂತದ್ದೊಂದು ಪುಸ್ತಕ ತರುವ ಆಸೆ ನನ್ನಲ್ಲಿತ್ತು. ಆದರೆ ಅಣ್ಣ ಮುನ್ನಡೆದಿದ್ದಾರೆ. ಖುಷಿಯಾಗಿದೆ. ನಿಜಕ್ಕೂ ಇದೊಂದು ಅದ್ಬುತ ಸಾಧನೆ ಎಂದೇ ಭಾವಿಸುತ್ತೇನೆ.
(ಅನಿಲ್ ಕುಂಬ್ಳೆ ಕೂಡ ಒಬ್ಬ ಬೆಸ್ಟ್ ಪೋಟೋಗ್ರಾಫರ್.)
ಪರಿಸರ ದಿನಾಚರಣೆ ಶುಭಾಶಯಗಳು