Tuesday, June 16, 2009

ಮಿರುಗೋ ಕಣ್ಣಿನ ಹಸಿರು ಗುಪ್ಪಿಎತ್ತರದ ಮರದಿಂದ ಪುರ್ ಎಂದು ಹಾರಿ ಹೋಗುವಾಗ ನೋಡಿದರೆ ಯುದ್ಧ ವಿಮಾನ ಟೇಕ್ಆಫ್ ಮಾಡಿದಂತೆ ಇರುತ್ತದೆ. ಎತ್ತರದಿಂದ ನೆಲಕ್ಕಿಳಿದು ಕುಳಿತುಕೊಳ್ಳುವಾಗಲೂ ಅಸ್ಟೆ. ಪೇಪರ್ ವಿಮಾನ ಮಾಡಿ ಮೇಲಕ್ಕೆ ಹಾರಿಸಿದಾಗ ಹೇಗೆ ನೆಲ ಸೇರುತ್ತದೋ ಹಾಗೆ. ತನ್ನೆರಡು ರೆಕ್ಕೆಗಳನ್ನು ಹೊರಕ್ಕೆ ಚಾಚಿಕೊಂಡಿದೆಯೋ ಇಲ್ಲವೋ ಎನ್ನುವಂತೆ ನೆಲಸೇರುತ್ತದೆ.
ಇದನ್ನು ನೋಡಲು ಗದ್ದೆ, ಬಯಲು ಪ್ರದೆಶದಲೆಲ್ಲೋ ಕುಳಿತಿದ್ದರೆ ಖಂಡಿತ ಅಸ್ಟು ಸುಲಭವಾಗಿ ನಿಮ್ಮಿಂದ ಈ ಹಕ್ಕಿಯನ್ನು ಗುರುತಿಸಲು ಸಾದ್ಯವಿಲ್ಲ. ಕಾರಣ ಈ 'ಹಸಿರುಗುಪ್ಪಿ' (Little Green Heron) ಏಕಾಂಗಿ. ಅಸ್ಟೇ ಅಲ್ಲ, ಇನ್ನೇನು ಸೂರ್ಯಸ್ತವಾಗುತ್ತದೆ ಎನ್ನುವಾಗಲೇ ಬೇಟೆಗಾಗಿ ಗೂಡಿನಿಂದ ಹೊರಬೀಳುತ್ತದೆ. ಕತ್ತಲು ಆವರಿಸುತ್ತಿದ್ದಂತೆ ಇದರ ಕಾರ್ಯಾಚರಣೆ ಆರಂಭಗೊಳ್ಳುತ್ತದೆ. ಹೆಚ್ಚುಕಡಿಮೆ ರಾತ್ರಿ ಕೊಕ್ಕರೆಯ ಸ್ವಭಾವದ ಹಕ್ಕಿ ಇದು.
ಕೆರೆ, ಕೆಸರುಗದ್ದೆಗಳಲ್ಲಿ ಇರುವ ಈ ಹಸಿರುಗುಪ್ಪಿ ಜಲಚರಗಳನ್ನೇ ಶಿಕಾರಿಮಾಡಿ ತಿನ್ನುತ್ತದೆ. ಸಿಗಡಿ, ಏಡಿ, ಚಿಕ್ಕ ಚಿಕ್ಕ ಮೀನು ಎಂದರೆ ಈ ಹಕ್ಕಿಗೆ ಪಂಚಪ್ರಾಣ.
ಸಂತಾನೋತ್ಪತ್ತಿಯ ವೇಳೆಯಲ್ಲಿ ಬೆಳ್ಳಕ್ಕಿಗಳಂತೆ ನೆತ್ತಿಯ ಮೇಲೆ ಜುಟ್ಟು ಬರುವುದನ್ನು ಕಾಣಬಹುದು. ಉಳಿದಂತೆ ಈ ಹಸಿರುಗುಪ್ಪಿ ಕೆಸರುಗುಪ್ಪಿಯನ್ನೇ ಹೋಲುತ್ತದೆ. ಬೆನ್ನು ಮತ್ತು ರೆಕ್ಕೆಗಳೆಲ್ಲ ಹಸಿರು ಮಿಶ್ರಿತ ಬಣ್ಣದಿಂದ ಇರುತ್ತದೆ. ಕಾಲುಗಳು, ಕತ್ತು ಮತ್ತು ಹೊಟ್ಟೆಭಾಗ ಹಳದಿ ಮಿಶ್ರಿತ ಬೂದು ಬಣ್ಣ. ಎದೆಭಾಗಗಳಲ್ಲಿ ಕಂದು ಬಣ್ಣದ ಗರಿಗಳೂ ಇರುತ್ತವೆ.
ಜೌಗು, ಹುಲ್ಲುಗಳಿರುವ ಪ್ರದೇಶಗಳಲ್ಲಿ ಜಾಸ್ತಿಯಾಗಿ ಕಂಡುಬರುವ ಈ ಹಕ್ಕಿಯನ್ನು ಹಸಿರ್ಗಪ್ಪು ಬಕ ಎಂದೂ ಕರೆಯುತ್ತಾರೆ.
ಮರಗಳ ಮೇಲೆ ಕಡ್ಡಿಗಳಿಂದ ಗೂಡುಮಾಡಿಕೊಳ್ಳುವ ಹಸಿರುಗುಪ್ಪಿ ಮಾರ್ಚ್-ಆಗಸ್ಟ್ ತಿಂಗಳಾವಧಿಯಲ್ಲಿ 2-5 ಮೊಟ್ಟೆಗಳನ್ನಿಟ್ಟು ಮರಿಮಾಡುತ್ತದೆ. ಹಸಿರುಗುಪ್ಪಿಯ ಕಣ್ಣುಗಳು ತಿಳಿ ಹಳದಿಯಿಂದ ಇದ್ದು ಮಿರುಗುತ್ತವೆ. ಭಾರತದ ಎಲ್ಲಾ ಭಾಗಗಳಲ್ಲಿಯೂ ಇವೆ. ಬಾಂಗ್ಲ, ಲಂಕಾ ಮತ್ತು ಪಾಕಿಸ್ತಾನಗಳಲ್ಲಿಯೂ ಇವೆ.
ಚಿತ್ರಕೃಪೆ: ಚಿಟ್ಟಿ

7 comments:

sunaath said...

ಸುಂದರವಾದ ಫೋಟೊ ಹಾಗೂ ವರ್ಣನೆ. ಕೆಸರುಗುಪ್ಪಿಗೆ ಇಂಗ್ಲೀಶಿನಲ್ಲಿ ಏನು ಹೇಳುತ್ತಾರೆ?

ಜಿ.ಎಸ್.ಬಿ. ಅಗ್ನಿಹೋತ್ರಿ said...

@ಸುನಾತ್
ಸಾಮಾನ್ಯವಾಗಿ Chestnut bellied Heron ನನ್ನು ಕೆಸರುಗುಪ್ಪಿ ಎಂದು ಕರೆಯುವುದುಂಟು. ಇನ್ನು ನಮ್ಮ ಕರ್ಣಾಟಕದ ಕೆಲವು ಭಾಗದಲ್ಲಿ ಇದೇ ಹಕ್ಕಿಯನ್ನೇ ಕೆಸರುಗುಪ್ಪಿ ಎನ್ನುವವರೂ ಇದ್ದಾರೆ. ಈ ಜಾತಿಗೆ ಸೇರಿದ ಹಕ್ಕಿಗಳಲ್ಲಿ ಕೆಸರಿನಲ್ಲೇ ಇರುವ ಹಕ್ಕಿಗಳು ಮುರ್ನಾಲ್ಕಿವೆ. ರಾತ್ರಿಕೊಕ್ಕರೆ ಕೂಡ ಕೆಲ ವೇಳೆ ಕೆಸರಲ್ಲೇ ಇರತ್ತೆ.

ವಿನುತ said...

ಮತ್ತೊ೦ದು ಸು೦ದರ ಹಕ್ಕಿಯ ಪರಿಚಯಕ್ಕೆ ಧನ್ಯವಾದಗಳು

ಜಿ.ಎಸ್.ಬಿ. ಅಗ್ನಿಹೋತ್ರಿ said...

@ ವಿನುತ
ಧನ್ಯವಾದ... ವಾರಕ್ಕೊಂದು ಹಕ್ಕಿಯ ಬಗ್ಗೆ ಬರೆಯುವೆ.

shivu.k said...

ಅಗ್ನಿಹೋತ್ರಿ ಸರ್,

ಕೆಸರು ಗುಪ್ಪಿಯ ಫೋಟೋಗಳು ತುಂಬಾ ಚೆನ್ನಾಗಿ ತೆಗೆದಿದ್ದೀರಿ....ಅವುಗಳ ಚಟುವಟಿಕೆ ಇತ್ಯಾದಿಗಳ ಬಗ್ಗೆ ಚೆನ್ನಾಗಿ ಮಾಹಿತಿ ನೀಡಿದ್ದೀರಿ...ಇನ್ನಷ್ಟು ಬರೆಯಿರಿ...

ಧನ್ಯವಾದಗಳು...

ಜಲನಯನ said...

ಅಗ್ನಿಯವರೇ....
ಹಕ್ಕಿಗಳ ಪ್ರಪಂಚದ ಬಗ್ಗೆ ಒಳ್ಳೆ ಸರಣಿಯನ್ನೇ ಕೊಡ್ತಿದ್ದೀರಾ...ಮಾಹಿತಿಯ ಜೊತೆಗೆ ಚಿತ್ರ ಮನಮೋಹಕವಾಗಿ ಮೂಡಿಬರುತ್ತಿವೆ. Welldone

ರಾಘವೇಂದ್ರ ಹೆಗಡೆ- ಸಕಲ ಸ್ಟುಡಿಯೋ. said...

ತುಂಬಾ ಸಂತೋಷವಾಯ್ತು ಸಾರ್. ಅಂತೂ ಕ್ಯಾಮರಾ ಚಾಲ್ತಿ ಇಟ್ಟಿದ್ದೀರಲ್ಲಾ. ಚೆನ್ನಾಗಿದೆ ಅಗ್ನಿ.