|
- ಗುಬ್ಬಚ್ಚಿ ನಗರ ಬಿಟ್ಟು ಓಡಿದವು... ಎಂದು ಗುಬ್ಬಚ್ಚಿದಿನಾಚರಣೆ ಬಂದಾಗಲೆಲ್ಲ ಕತೆ ಹೇಳ್ತೇವೆ....
- ಮೊಬೈಲ್ ಟವರ್ ಗಳು ಜಾಸ್ತಿ ಆಗ್ತಿರೋ ಕಾರಣ ಗುಬ್ಬಚ್ಚಿ ನಗರ ಬಿಟ್ಟು ಹೋಗ್ತಿವೆ....
ಮೊಬೈಲ್ ಗುಬ್ಬಿಗಳಿಗೊಂದೇ ತೊಂದರೆ ಮಾಡುತ್ತಿವೆಯಾ? ಕಾಗೆ, ಮೈನಾ ಇತ್ಯಾದಿ ಕೆಲ ಪಕ್ಷಿಗಳಿಗೆ ತೊಂದರೆ ಮಾಡುತ್ತಿಲ್ಲವೇ? ಶಿವಾಜಿನಗರ ಸೇರಿದಂತೆ ಬೆಂಗಳೂರಿನ ನೂರಾರು ಕಡೆ ಮಾರಾಟಕ್ಕೆಂದು ಬಂಧಿಸಿಟ್ಟ ತರಾವರಿಯ ಲವ್ ಬರ್ಡ್ಸ್ ಗಳಿಗೆ ಯಾವುದೇ ತೊಂದರೆ ಮಾಡುತ್ತಿಲ್ಲವೇ?
ಹೀಗೆ ಅನೇಕ ಪ್ರಶ್ನೆಗಳು ನನ್ನನ್ನ ಕಾಡಿದ್ದಿದೆ. ಆದರೆ ನಾನು ತಿಳಿದು ಕೊಂಡಂತೆ ಗುಬ್ಬಚ್ಚಿಗಳು ನಗರವನ್ನು ಬಿಟ್ಟು ಎಲ್ಲಿಗೂ ಹೋಗಿಲ್ಲ. ಇಲ್ಲೇ ಇವೆ. ನಿಮ್ಮ ಮನೆ ಬಾಗಿಲಿಗೆ ಬರುತ್ತಿಲ್ಲ ಅಸ್ಟೆ.
ಕೆಲ ವರ್ಷಗಳ ಹಿಂದೆ ಈ ಗುಬ್ಬಿಗಳಿಗೆ ನಮ್ಮ-ನಿಮ್ಮ ಮನೆಯಲ್ಲಿ ಆಹಾರ ಸಿಗುತ್ತಿದ್ದವು. ಆದರೆ ಇಂದು ಆಹಾರ ಸಿಗುತ್ತಿವೆಯಾ? ಪ್ರಾಮಾಣಿಕವಾಗಿ ನಾವು ಗುಬ್ಬಚ್ಚಿಗೆ ಬೇಕಾದ ಆಹಾರ ನೀಡುತ್ತಿದ್ದೇವಾ?
ಖಂಡಿತವಾಗಿಯೂ ಇಲ್ಲ ಬಿಡಿ. ಬದಲಾದ ನಮ್ಮ ಜೀವನ ಶೈಲಿ ಈ ಗುಬ್ಬಿಗಳ ಜೀವಕ್ಕೆ ಕಂಟಕ ಪ್ರಾಯವಾಗಿದೆ. ನಮ್ಮ ಮನೆ ಸದಸ್ಯರಂತೆ ವಾಸವಾಗುತ್ತಿದ್ದ ಗುಬ್ಬಿಗಳು ಇಂದಿನ ಸ್ಲ್ಯಾಬ್ ಮನೆಗಳಲ್ಲಿ ಎಲ್ಲಿ ವಾಸಿಸಬೇಕು? ನಾವೇನಾದ್ರು ಅದಕ್ಕೊಂದು ಪ್ರತ್ಯೇಕ ಮನೆ(ಗೂಡು) ಮಾಡಿಕ್ಕೊಟ್ಟಿದ್ದೇವಾ? ಮನೆ ಇರಲಿ ನಾವಿದ್ದ ಮನೆ ಆವರಣಕ್ಕೆ ಕಾಲಿಡಲೇ ಬಿಡುತ್ತಿಲ್ಲ.
ನಮ್ಮ ಅಮ್ಮನೋ, ಅಜ್ಜಿಯೋ ಮನೆಯಲ್ಲಿ ಅಕ್ಕಿ, ಗೋದಿ, ಜೋಳ, ರಾಗಿಯಲ್ಲಿದ್ದ ಹುಳು, ನೆಲ್ಲು ಆರಿಸಿ ಅಂಗಳಕ್ಕೆ ಎಸೆಯುತ್ತಿದ್ದರು. ಅವನ್ನೆಲ್ಲ ಆರಿಸಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದವು ಈ ಗುಬ್ಬಿಗಳು. ಎಸ್ಟೋ ಮನೆಗಳಲ್ಲಿ ಬೆಳಿಗ್ಗೆ, ಸಾಯಂಕಾಲ ಧಾನ್ಯಗಳನ್ನ ತುಳಸಿ ಕಟ್ಟೆಯ ಮೇಲೆ, ಮನೆ ಎದುರ ಬಾಗಿಲಲ್ಲಿ ಇಡುವ ಪರಿಪಾಟ ಇತ್ತು. ಇಗೆಲ್ಲಿವೆ?
ಇನ್ನು ಹಳ್ಳಿಗಳಲ್ಲಿ ಇನ್ನೂ ಉಳಿದಿವೆ. ಹುಲ್ಲಿನಿಂದ ಬತ್ತವನ್ನ ಬೇರ್ಪಡಿಸುವ ವೇಳೆ ಸಹಜವಾಗಿಯೇ ಕಾಣಲು ಸಾಧ್ಯವಿದೆ. ನಗರ ಪ್ರದೇಶದ ಮನೆಗಳಲ್ಲಿ ಇಂಥ ಯಾವುದೇ ಸನ್ನಿವೇಶಗಳು ಇಲ್ಲದಿರುವಾಗ ಹೇಗೆ ಗುಬ್ಬಚ್ಚಿಗಳು ಇರಬೇಕು? ಆದರೆ ಎಪಿಎಮ್ ಸಿ ಯಾರ್ಡ್ ಗಳಲ್ಲಿ , ಮಾರುಕಟ್ಟೆ ಪ್ರದೇಶಗಳಲ್ಲಿ, ಕಿರಾಣಿ ಅಂಗಡಿಗಳ ಮುಂಭಾಗ ಈಗಲೂ ಗುಬ್ಬಿಗಳು ಇವೆ. ಪ್ರತಿಯೊಬ್ಬರೂ ಮನೆಗಳಲ್ಲಿ ಕಾಳು-ಕಡಿ ಹಾಕುವ ಆಭ್ಯಾಸ ಬೆಳೆಸಿಕೊಂಡರೆ ಈಗಲೂ ಗುಬ್ಬಚ್ಚಿಗಳು ನಿಮ್ಮ ಮನೆಯಲ್ಲಿ, ಅಥವಾ ನೆರೆಹೊರೆಯ ಕಟ್ಟಡಗಳಲ್ಲಿ ವಾಸವಾಗಿದ್ದು, ಪ್ರತಿದಿನ ನಿಮ್ಮ ಮನೆಗೆ ಭೇಟಿ ಕೊಡುವುದರಲ್ಲಿ ಅನುಮಾನವಿಲ್ಲ.