Saturday, May 2, 2009

ಜಗಳ ಗಂಟಿ 'ಕೋಮಲ ಬದನಿಕೆ'



ಹಲವರಿಗೆ ಹೂವಿನ ಮೇಲೆ ವಿಪರೀತ ವ್ಯಾಮೋಹ. ಅವರಲ್ಲೇ ಕೆಲವರು ದಿನ ಬೆಳಗಾದರೆ ಹೂವಿಗಾಗಿ ಇನ್ನೊಬ್ಬರ ಮನೆಯ ಬೇಲಿ ಹಾರಿ ಕಿತ್ತು ತರುವವರೂ ಇದ್ದಾರೆ.
ಈ ಹಕ್ಕಿ ಕೂಡ ಇದೇ ಜಾತಿಗೆ ಸೇರಿದ್ದು. ತನ್ನ ಪಕ್ಕದಲ್ಲೇ ಇರುವ ಹೂವಿನ ಮಕರಂದ ಅಥವಾ ಹಣ್ಣುಗಳನ್ನು ಆ ಕ್ಷಣವೇ ತಿನ್ನಲು ಹೋಗುವುದಿಲ್ಲ. ತನ್ನ ಜಾತಿಗೆ ಸೇರಿದ ಇನ್ನೊಂದು ಹಕ್ಕಿ ಇರುವಲ್ಲಿಗೆ ಹೋಗಿ ಕದ್ದು ತರುತ್ತದೆ. ಅಥವಾ ಅಲ್ಲಿರುವ ಜಾತಿ ಹಕ್ಕಿಯ ಜತೆಗೆ ಜಗಳವಾಡಿಯಾದರೂ ಕಿತ್ತು ತಿನ್ನುತ್ತದೆ.
ಹೆಸರು 'ಕೋಮಲ ಬದನಿಕೆ'(Plan Flowerpecker) .
ಲೋರಾಂಥೇಸಿ ಕುಟುಂಬಕ್ಕೆ ಸೇರಿದ ಹಕ್ಕಿ. ಕೋಮಲ ಬದನಿಕೆಯನ್ನು ಪೇಲವ ಬದನಿಕೆ, ಪಾಚಿ ಚುಂಡಕ್ಕಿ, ಹೂ ಚುಂಡಕ್ಕಿ ಎಂದೂ ಕರೆಯುತ್ತಾರೆ. ಎಲೆಗಳ ಮಧ್ಯದಲ್ಲೆಲ್ಲೋ ಕುಳಿತಿದ್ದರೆ ಗುರುತಿಸಲು ಸಾದ್ಯವೇ ಇಲ್ಲ. ಅಜ್ಜಪ್ಪ ಎಂದರೂ ಸದ್ದು ಮಾಡುವುದಿಲ್ಲ. ಇನ್ನು ನೋಡಲು ಹೆಚ್ಚುಕಡಿಮೆ ಎಲೆಯದೆ ಬಣ್ಣ.
ತಿಳಿ ಹಸಿರು, ಕಡು ಮಿಶ್ರಿತ ಬೂದು ಬಣ್ಣದಿಂದ ಇರುತ್ತದೆ. ಕಾಲುಗಳು ಮತ್ತು ಕೊಕ್ಕು ಹಳದಿ ಮಿಶ್ರಿತ ಬೂದು ಬಣ್ಣದಿಂದಿರುತ್ತೆ. ಒಟ್ಟಾರೆಯಾಗಿ ಇಡೀ ದೇಹ ಬೂದು. ಚೀಕ್....ಚಿಕ್ ಎಂದು ಸದ್ದು ಮಾಡುತ್ತಿರುತ್ತದೆ.
ಕುರುಚಲು ಕಾಡು, ತೋಟಗಳಲ್ಲಿ ಹೆಚ್ಚು ಹೆಚ್ಚು ವಾಸವಾಗಿರುವ ಈ ಬದನಿಕೆ ಹಕ್ಕಿಯ ಬಾಲ ಮೋಟಾಗಿರುತ್ತದೆ. ಹೆಚ್ಚು ಕಡಿಮೆ ಗುಬ್ಬಚ್ಚಿಯಸ್ಟೆ ಗಾತ್ರದ ಕೋಮಲ ಬದನಿಕೆ ಫೆಬ್ರವರಿಯಿಂದ ಜುಲೈ ತಿಂಗಳಾವಧಿಯಲ್ಲಿ 2-3 ಬಿಳಿಯದಾದ ಮೊತ್ತೆಗಳನ್ನಿಟ್ಟು 16 ರಿಂದ 22 ದಿನಗಳ ಕಾಲ ಕಾವು ನೀಡಿ ಮರಿಮಾಡುತ್ತದೆ.
ಸಂತಾನೋತ್ಪತ್ತಿಯ ವೇಳೆಯಲ್ಲಿ ಗೂಡು ಮಾಡಿಕೊಳ್ಳುತ್ತದೆ. ಕೋಮಲ ಬದನಿಕೆಯನ್ನು ಬಾಂಗ್ಲ, ಶ್ರೀಲಂಕಾಗಳಲ್ಲಿಯೂ ಕಾಣಲು ಸಾಧ್ಯ. ಕರ್ನಾಟಕದ ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಜಾಸ್ತಿ. ಹಣ್ಣು, ಹೂವಿನ ಮಕರಂದವೇ ಈ ಹಕ್ಕಿಯ ಪ್ರಮುಖ ಆಹಾರ.

7 comments:

ಮಲ್ಲಿಕಾರ್ಜುನ.ಡಿ.ಜಿ. said...

ಸುಕೋಮಲ ಹಕ್ಕಿಯ ಸ್ವಭಾವವನ್ನು ಅದ್ಭುತವಾಗಿ ವರ್ಣಿಸಿದ್ದೀರಿ. ಈ ತರಹದ ವಿವರಣೆ ನಮಗೆ ಯಾವ ಪುಸ್ತಕದಲ್ಲೂ ಸಿಗುವುದಿಲ್ಲ. ಧನ್ಯವಾದಗಳು.

ಜಿ.ಎಸ್.ಬಿ. ಅಗ್ನಿಹೋತ್ರಿ said...

thanks sir.

PARAANJAPE K.N. said...

ಚೆನ್ನಾಗಿದೆ. ಚಿತ್ರ-ಬರಹ

ಹರೀಶ ಮಾಂಬಾಡಿ said...

ಕೋಮಲ ಬದನಿಕೆ
informative..

Tina said...

ಅಗ್ನಿಹೋತ್ರಿಯವರೆ,
ನಿಮ್ಮ ಬ್ಲಾಗಿಗೆ ಭೇಟಿನೀಡಿ ಖುಶಿ ಆಯಿತು. ಎಷ್ಟು ಅಪರೂಪದ ಪಕ್ಷಿಗಳು!! ಎಷ್ಟು ಒಳ್ಳೆಯ ಮಾಹಿತಿ! ಇನ್ನು ಮುಂದೆ ಭೇಟಿ ನೀಡುತ್ತ ಇರುತ್ತೇನೆ.
ಟೀನಾ.

ಜಿ.ಎಸ್.ಬಿ. ಅಗ್ನಿಹೋತ್ರಿ said...

Thanks, ನನ್ನ ಬರಹ ಮೆಚ್ಚಿಕೊಂಡಿದ್ದಕ್ಕೆ.
ಸ್ನೇಹಿತರೆ ನಿಮ್ಮ ಸುತ್ತಮುತ್ತ ಪಕ್ಷಿ-ಪ್ರಾಣಿಗಳ ಬಗ್ಗೆ ವಿಶೇಷ ಮಾಹಿತಿ ಸಿಗುತ್ತದೆ ಎಂದಾದರೆ ದಯವಿಟ್ಟು ನನಗೊಂದು ಸುಳಿವು ನೀಡಿ. ನಾವೆಲ್ಲಾ ಸೇರಿ ಹೊಸದೊಂದು ಮಾಹಿತಿಗಾಗಿ ಹುಡುಕಾಟ ನಡೆಸೋಣ.

paapu paapa said...

sir,
neevu hakkiya follower alva.