Friday, May 29, 2009

ಕೂ... ಎನ್ನೊ 'ಕಂದು ಬೆಳವ'



ನದಿಯ ದಡದಲ್ಲಿ ದೋಣಿ ಹೊರಡುವ ಮೊದಲು ನಾವಿಕ 'ಕೂ...' ಹಾಕುವುದನ್ನು ನೋಡಿದ್ದೇವೆ. ಆದರೆ ಇದೇ ತರ ಹಕ್ಕಿಯೊಂದು 'ಕೂ...' ಹಾಕುವುದನ್ನು ಎಲ್ಲಾದರೂ ನೋಡಿದ್ದೀರಾ...?
ಇಲ್ಲ ಎಂದಾದರೆ ನೋಡಿ ಇಲ್ಲಿದೆ!
ಈ 'ಕಂದು ಬೆಳವ' (Laughing Dove) 'ಕೂ...' ಎಂದು ಕೂಗಿಕೊಳ್ಳುತ್ತಲೇ ಇರುತ್ತದೆ. ನಾವಿಕ ತನ್ನ ದೋಣಿಯ ಪ್ರಯಾಣಿಕರಿಗಾಗಿ ಕೂ... ಹಾಕಿದರೆ ಇದು ತನ್ನ ಮರಿ, ಸಂಗಾತಿಗಾಗಿ ಕೂಗಿಕೊಳ್ಳುತ್ತಿರುತ್ತದೆ. ಸಾಮಾನ್ಯವಾಗಿ ಒಂಟಿಯಾಗಿ ಇರಲು ಬಯಸುವುದಿಲ್ಲ.
ಕಂದು ಬೆಳವ ಹಕ್ಕಿಗೆ ಮೊಟ್ಟೆಯಿಟ್ಟು ಮರಿಮಾಡಲು ನಿರ್ದಿಷ್ಟ ಕಾಲವಿಲ್ಲ. ತನಗಿಸ್ಟವಾದಾಗ ಸಂತಾನೋತ್ಪತ್ತಿಯ ಕಾರ್ಯದಲ್ಲಿ ತೊಡಗಿಕೊಳ್ಳುತ್ತದೆ. ಒಮ್ಮೆ ಎರಡರಿಂದ ಮೂರು ಮೊಟ್ಟೆಗಳನ್ನಿಟ್ಟು ಮರಿಮಾಡುವ ಕಂದು ಬೆಳವ, 16ರಿಂದ18 ದಿನಗಳ ಕಾಲ ಕಾವು ನೀಡುತ್ತದೆ. ಸಂತಾನೋತ್ಪತ್ತಿಯ ವೇಳೆಯಲ್ಲಿ ಮರಗಳ ಎತ್ತರದಲ್ಲಿ ಚಂದ್ರಾಕಾರದ ಗೂಡು ಕಟ್ಟಿಕೊಳ್ಳುತ್ತದೆ.
ನೋಡಲು ಪಾರಿವಾಳದಂತೆ ತೋರುವ ಕಂದು ಬೆಳವನನ್ನು ಬಿಲಗುಪ್ಪ, ಕಂದು ಕಪೋತ, ಸಣ್ಣ ಚೂರೆಹಕ್ಕಿ ಎಂದೆಲ್ಲ ಕರೆಯುತ್ತಾರೆ. ಮೈ ಬಣ್ಣ ಕಂದು ಮಿಶ್ರಿತ ಬೂದು ಇರುವ ಕಾರಣ ಈ ಹಕ್ಕಿಯನ್ನು ಕಂದು ಬೆಳವ ಎಂದು ಕರೆಯುತ್ತಾರೆ.
ಕಂದು ಬೆಳವನ ಬೆನ್ನು, ನೆತ್ತಿ, ಕತ್ತು ಕಂದು ಬಣ್ಣದಿಂದಿದ್ದರೆ, ಹೊಟ್ಟೆ, ಎದೆ ಭಾಗ ತಿಳಿ ಬಣ್ಣದಿಂದಿರುತ್ತದೆ. ಇನ್ನು ಕತ್ತಿನ ಕೆಲ ಭಾಗದಲ್ಲಿ ಚೆಸ್ ಮನೆಗಳಂತೆ ಕಪ್ಪು ಪಟ್ಟಿಗಳಿರುತ್ತವೆ. ಇದರ ಸಹಾಯದಿಂದಲೇ ಈ ಹಕ್ಕಿಯನ್ನು ಸುಲಭವಾಗಿ ಗುರುತಿಸಲು ಸಾಧ್ಯ. ಕಾಲು ಮತ್ತು ಕೊಕ್ಕು ಬೂದು ಮಿಶ್ರಿತ ಕಂದು ಬಣ್ಣದಿಂದಿರುತ್ತದೆ. ಕಣ್ಣಿನ ಸುತ್ತ ಬಿಳಿ ಪಟ್ಟಿ ಇದ್ದು, ಇದು ಮಿರುಗುತ್ತದೆ. ಉದ್ದನೆಯ ಬಾಲ ಮತ್ತು ಪುಕ್ಕವನ್ನು ಅಲ್ಲಾಡಿಸುತ್ತ ಇರುತ್ತದೆ. ಕತ್ತು ಕೂಡ ಪಾರಿವಾಳದಂತೆ ಅತ್ತಿತ್ತ ಹೂರಲಾಡುತ್ತಿರುತ್ತದೆ.
ಕುರುಚಲು ಕಾಡುಗಳಲ್ಲಿ ವಾಸವಾಗಿರುವ ಈ ಹಕ್ಕಿ ಪೋದೆಗಳಲ್ಲಿಯೂ ಗೂಡು ಮಾಡಿಕೊಳ್ಳುತ್ತದೆ. ರಾಜ್ಯದಲ್ಲಿ ನಂದಿಬೆಟ್ಟ, ಬನ್ನೇರುಘಟ್ಟ, ಸಾವನದುರ್ಗ, ದೇವರಾಯನದುರ್ಗಗಳಲ್ಲಿ ಜಾಸ್ತಿ. ಬಾಂಗ್ಲ, ಪಾಕಿಸ್ತಾನ್ ಗಳಲ್ಲಿ ನೋಡಸಿಗುತ್ತದೆ. ಬೇಳೆ-ಕಾಳುಗಳೇ ಈ ಹಕ್ಕಿಯ ಪ್ರಮುಖ ಆಹಾರ.
ಚಿತ್ರ ಕೃಪೆ: ಅಂತರ್ಜಾಲ

7 comments:

Unknown said...

ಮತ್ತೊಂದು ಒಳ್ಳೆಯ ಮಾಹಿತಿಯುಕ್ತ ಲೇಖನಕ್ಕೆ ಧನ್ಯವಾದಗಳು. ನಿಮ್ಮ ಬ್ಲಾಗಿನ ಅಕ್ಷರಗಳನ್ನು ಸ್ವಲ್ಪ ದೊಡ್ಡದು ಮಾಡಿದರೆ ಸರಳ ಓದಿಗೆ ಅನುಕೂಲವಾಗುತ್ತದೆ ಎಂಬುದು ನನ್ನ ಅನಿಸಿಕೆ.

ಮಲ್ಲಿಕಾರ್ಜುನ.ಡಿ.ಜಿ. said...

ಹಕ್ಕಿಗಳನ್ನು ನೋಡುವುದೇ ಚೆನ್ನ. ಬೋನಸ್ ಎಂದರೆ ನಿಮ್ಮ ಆಪ್ತ ವಿವರಣೆ. ಧನ್ಯವಾದಗಳು ಸರ್. ಹೊಸ ಹಕ್ಕಿಗಾಗಿ.

sunaath said...

ಆಂಗ್ಲಭಾಷೆಯಲ್ಲಿರುವ ಹಕ್ಕಿಹೆಸರನ್ನು ಕನ್ನಡಕ್ಕೆ ಹೊಂದುವಂತೆ
ಹೇಳುತ್ತಿದ್ದೀರಿ. ಅಭಿನಂದನೆಗಳು.

ಹರೀಶ ಮಾಂಬಾಡಿ said...

ನಿಮ್ಮ ಪುಸ್ತಕಕ್ಕೆ ಕಾಯುತ್ತಿದ್ದೇನೆ

ಜಿ.ಎಸ್.ಬಿ. ಅಗ್ನಿಹೋತ್ರಿ said...

ಧನ್ಯವಾದಗಳು...
@ಮಾಂಬಾಡಿ ಅವರೇ ಎಲ್ಲದಕ್ಕೂ ಸಮಯ ಬರಬೇಕಂತೆ...

ವಿನುತ said...

ಶರೀಫರ ಕವನಗಳ ಬೆಳವನನ್ನು ಹೆಚ್ಚಿನ ವಿವರಗಳೊ೦ದಿಗೆ ತೋರಿಸಿದ್ದಕ್ಕೆ ಧನ್ಯವಾದಗಳು.

ಜಿ.ಎಸ್.ಬಿ. ಅಗ್ನಿಹೋತ್ರಿ said...

@ವಿನುತ
ಶರೀಫರನ್ನು ನೆನಪು ಮಾಡಿಕೊಟ್ಟಿದ್ದಕ್ಕೆ ತಮಗೂ ಧನ್ಯವಾದಗಳು...