Saturday, May 14, 2011

ದಾಖಲೆ ಬರೆದ 'ಹುಲಿ ದಾರಿ'!

ಒಂದು ಕ್ಷೇತ್ರದಿಂದ ಇನ್ನೊಂದು ಕ್ಷೇತ್ರಕ್ಕೆ ಹಕ್ಕಿಗಳು ಹೇಗೆ ವಲಸೆ ಹೋಗುತ್ತೋ ಹಾಗೇ ಹುಲಿ ಕೂಡ ಆಗಾಗ ಪ್ರಯಾಣ ಬೆಳೆಸುತ್ತೆ ಅನ್ನೋದಕ್ಕೆ ಇಲ್ಲೊಂದು ಉದಾಹರಣೆ ಇದೆ. ಖ್ಯಾತ ವನ್ಯಜೀವಿ ತಜ್ಞ ಡಾ. ಉಲ್ಲಾಸ್ ಕಾರಂತರು ಮೊನ್ನೆ ಮೊನ್ನೆಯಷ್ಟೇ ಪತ್ತೆ ಹಚ್ಚಿದ ಮತ್ತೊಂದು ಹುಲಿಯ ದಾಖಲೆಯ ವಲಸೆಯ ಕತೆ ನಿಮಗಾಗಿ...
 ಇದು ಒಂದೆರಡು ಕಿಲೋ ಮೀಟರ್ ಪ್ರಯಾಣವಲ್ಲ. ಬರೋಬ್ಬರಿ 280 ಕಿಲೋ ಮೀಟರ್ ದೂರ ಕ್ರಮಿಸಿದ ಗಂಡು ಹುಲಿರಾಯ ಶಿವಮೊಗ್ಗದ ಶಿಕಾರಿಪುರದಲ್ಲಿ ಗಲಾಟೆ
 ಮಾಡಿದ ಪ್ರಹಸನ. ಈ ಹುಲಿಯ ಜಾಡು ಹಿಡಿದು ಹೊರಟ ಕಾರಂತರು ಮತ್ತು ಅವರ ಟೀಮ್ ಇದು ಬಂಡೀಪುರ ಅಭಯಾರಣ್ಯ ಪ್ರದೇಶ ಗುಂಡ್ರೆಯಲ್ಲಿ ಹುಟ್ಟಿ ಬೆಳೆದ
ಹುಲಿರಾಯ ಎನ್ನುವುದನ್ನು ಪತ್ತೆ ಹಚ್ಚಿದ್ದಾರೆ.
 ಅದು ಹೇಗೆ ಸಾಧ್ಯ ಎನ್ನುವುದು ನಿಮ್ಮಲ್ಲಿ ಪ್ರಶ್ನೆ ಉದ್ಭವಿಸಬಹುದು. ಹೌದು, ಇವನ್ನೆಲ್ಲಾ ಪತ್ತೆ ಹಚ್ಚಲು ಸಾಧ್ಯ. ಇದಕ್ಕೆ ಈ ಹಿಂದಿನ ಕೆಲವು ದಾಖಲೆಗಳೆಲ್ಲಾ ಅಗತ್ಯ. ಅವನ್ನೆಲ್ಲಾ ತೆಗೆದು ತಾಳೆ ಹಾಕಿ ನೋಡಿದಾಗಪತ್ತೆ ಕಾರ್ಯ ಸಾಧ್ಯ.
 ಇತ್ತೀಚೆಗೆ ಶಿಕಾರಿಪುರದಲ್ಲಿ ಹುಲಿಯೊಂದು ಊರ ಹೊಲಕ್ಕೆ ನುಗ್ಗಿ ಗಲಾಟೆ ಮಾಡಿತ್ತಲ್ಲ. ಆಮೇಲೆ ಆ ಹುರಾಯನನ್ನು ಬಂಧಿಸಲಾಗಿತ್ತು. ಅಲ್ಲಿಂದ ಶುರುವಾಯ್ತು ಇದು ಎಲ್ಲಿಂದ ಬಂತು? ಇದರ ವಯಸ್ಸೆಷ್ಟು? ಹೀಗೆ ಹುಟ್ಟಿಕೊಂಡ ಪ್ರಶ್ನೆಗಳಿಗೆಲ್ಲ ಉತ್ತರ ಹುಡುಕುತ್ತಾ ಹೊರಟಾಗ ಗೊತ್ತಾಗಿದ್ದು ಇದು ಗುಂಡ್ರೆಯ ಕಾಡಲ್ಲಿ ಹುಟ್ಟಿ ಬೆಳೆದ ಹುಲಿ ಎಂದು.
 ಸಿಡಬ್ಲ್ಯುಎಸ್ ಕಾರ್ಯಕರ್ತರು ಈ ಹಿಂದೆ ಬಂಡೀಪುರ ಕಾಡಿನಲ್ಲಿ ಹಿಡಿದ(ಫೆಬ್ರವರಿ 10ರಂದು) ಹುಲಿರಾಯನ ಕ್ಯಾಮರಾ ಟ್ರ್ಯಾಪ್ಡ್ ಸಂಗ್ರಹ ಛಾಯಾಚಿತ್ರಗಳನ್ನು ಹಾಗೂ ಶಿಕಾರಿಪುರದಲ್ಲಿ ಸೆರೆ ಹಿಡಿದ ಹುಲಿರಾಯನ ಛಾಯಾಚಿತ್ರಗಳನ್ನು ತಾಳೆ ಹಾಕಿ ನೋಡಲಾಯಿತು. ಸಾಕಷ್ಟು ಹೊಂದಾಣಿಕೆ ಇದ್ದುದು ಕಂಡುಬಂತು. ಬಳಿಕ ಮೈ ಮೇಲಿನ ಪಟ್ಟೆಗಳನ್ನು, ವರ್ಣಗಳ ಸಾಮ್ಯತೆಗಳನ್ನು ಆಧರಿಸಿ ಅದೇ ಹುಲಿರಾಯ ಗುಂಡ್ರೆಯಿಂದ ಶಿವಮೊಗ್ಗದ ಶಿಕಾರಿಪುರಕ್ಕೆ ಕ್ರಮಿಸಿದ್ದಾನೆ ಅನ್ನೋ ನಿರ್ಧಾರಕ್ಕೆ ಬರಲಾಗಿದೆ.
 ಅಷ್ಟಕ್ಕೂ ಈ ಹುಲಿರಾಯನ ವಯಸ್ಸು ಮೂರು ವರ್ಷ ಮಾತ್ರ. ಈ ಮಹಾರಾಯನ ಗುಂಡ್ರೆ ಟು ಶಿಕಾರಿಪುರ ಪ್ರಯಾಣ ದಾಖಲೆ ಸೃಷ್ಟಿಸಿದೆ. ಹುಲಿಯೊಂದು ಇಷ್ಟೊಂದು ದೂರ ಕ್ರಮಿಸಿದ್ದು ಇದೇ ಮೊದಲು ಎಂದು ಹೇಳಲಾಗುತ್ತಿದೆ. ಅಷ್ಟಕ್ಕೂ ಇದು ಅಂದಾಜಿನ ಲೆಕ್ಕಾಚಾರ. ಎನ್ನೆಲ್ಲೆಲ್ಲಿ ಸುತ್ತಾಡಿ ಬಂದಿದೆಯೋ ಗೊತ್ತಿಲ್ಲ. ಒಂದೊಮ್ಮೆ ಈ ಹುಲಿಗೆ ರೇಡಿಯೋ ಟ್ರ್ಯಾಕಿಂಗ್ ಅಳವಡಿಸಿದ್ದರೆ ಇದನ್ನೂ ಪತ್ತೆ ಹಚ್ಚಲು ಸಾಧ್ಯವಿತ್ತು. ಕೇವಲ 15 ತಿಂಗಳುಗಳ ಅಂತರದಲ್ಲಿ ಈ ಹುಲಿ ಗುಂಡ್ರೆ ಟು ಶಿಕಾರಿಪುರಕ್ಕೆ ತನ್ನ ಆವಾಸ ಸ್ಥಾನವನ್ನು ಬದಲಾಯಿಸಿತ್ತು ಅನ್ನೋದು ಗ್ಯಾರಂಟಿ.

4 comments:

ರಾಮಸ್ವಾಮಿ ಹುಲಕೋಡು said...

ಇದು ಸಕತ್ ಇಂಟರೆಸ್ಟಿಂಗ್ ಸ್ಟೋರಿ, ಹಿಂದೆ ಒಂದು ಹುಲಿ ಹೀಗೇ ದಾಂಡೇಲಿಗೆ ಹೋಗಿತ್ತಂತೆ.

ಜಿ.ಎಸ್.ಬಿ. ಅಗ್ನಿಹೋತ್ರಿ said...

@ Ranaswamy
World Record Tiger
------------------
Man-animal conflicts are very common in India mainly because of shrinking habitats. This particular male tiger had walked into a plantation. The tiger was stoned by the villagers. The tiger, like any other cornered animal, retaliated by attacking the villagers. One person was killed before the tiger was tranquilized. It was subsequently released into another wildlife sanctuary. Before being released, the tiger was photographed and this photo was used to compare with the database consisting of other wild tigers captured using camera traps. It turned out that this particular tiger had been caught on camera on February 18 of 2010 in the Bandipur reserve. The straight line distance between Bandipur and Shikaripur is 280 kilometers, but the actual distance travelled by this male tiger would be approximately 350 kilometers. This would be a world record for the distance travelled by any tiger.

Read more: http://scienceray.com/biology/this-tiger-creates-a-world-record/#ixzz1MRRrKFMI

-ಹಾಲ said...

ಅಗ್ನಿ ಇದು ನಂಗ್ಯಾಕೋ ಡೌಟು... ಅಷ್ಟು ದೂರದಿಂದ ನಾಲ್ಕೈದು ಹೊಳೆಗಳನ್ನು ದಾಟಿ... ಯಾರ ಕಣ್ಣಿಗೂ ಬೀಳದಂತೆ ಶಿಕಾರಿಪುರಕ್ಕೆ ಬರುತ್ತೆ ಅಂದ್ರೆ ಸಾಮಾನ್ಯನಾ...
ಹುಲಿಗಳೂ ಗೊತ್ತು ಗುರಿ ಇಲ್ಲದೆ ಸುತ್ತುತ್ತಾವಾ...

ಜಿ.ಎಸ್.ಬಿ. ಅಗ್ನಿಹೋತ್ರಿ said...

@ ರಾಮಸ್ವಾಮಿ
ಸರ್, ಅನುಮಾನ ಯಾಕೆ? ಖಂಡಿತ ಸಾಧ್ಯ. ಈಗ ನನಗಾದ ಒಂದು ಅನುಭವ ನೆನಪಿಗೆ ಬರುತ್ತೆ. ನಮ್ಮ ಮನೆಯ ಒಂದು ಹಸುವನ್ನು ನಮ್ಮ ಮನೆಯಿಂದ ಹೆಚ್ಚು ಕಡಿಮೆ ೮೦ ಕಿಲೋ ಮೀಟರ್ ದೂರದ ಕುಂದಾಪುರದ ಒಂದು ಹಳ್ಳಿಗೆ ಕೊಟ್ಟಿದ್ದೆವು. (ನಮ್ಮ ಮನೆ ಕುಮಟದ ಮುರೂರು) ಎರಡು ತಿಂಗಳಾದ ಬಳಿಕ ಅದೇ ಹಸು ಮತ್ತೆ ನಮ್ಮ ಮನೆಯ ಬಾಗಿಲಿಗೆ ಬಂದು ನಿಂತಿತ್ತು. ಹೇಗಪ್ಪಾ, ಅಲ್ಲಿಂದ ಎಲ್ಲಿಗೆ ಬಂದೆ ಎಂದು ನನ್ನ ಅವ್ವ ಅತ್ತಿದ್ದು, ಆಮೇಲೆ ಮತ್ತೆ ಆ ಹಸುವನ್ನು ಮನೆಯಲ್ಲೇ ಇಟ್ಟುಕೊಂಡಿದ್ದು ಎಲ್ಲವೂ ಇನ್ನೂ ನನ್ನ ನೆನಪಿನ ಅಂಗಳದಿಂದ ಮಾಸಿಲ್ಲ.